ಪೌರ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ನ.15- ಬಯೋ ಮೆಟ್ರಿಕ್ ಪದ್ಧತಿ ರದ್ದುಗೊಳಿಸುವುದೂ ಸೇರಿದಂತೆ ಪ್ರಮುಖ 24 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಪೌರ ಕಾರ್ಮಿಕರು ಪಾಲಿಕೆ ಆವರಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ನೇತೃತ್ವದಲ್ಲಿ ನೂರಾರು ಪೌರ ಕಾರ್ಮಿಕರು ಸಾಂಕೇತಿಕ ಧರಣಿ ನಡೆಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಬಯೋ ಮೆಟ್ರಿಕ್ ಪದ್ಧತಿ ರದ್ದುಪಡಿಸುವುದಾಗಿ ಹೇಳಿದ್ದರು. ಹಾಗಾಗಿ ಅದನ್ನು ತಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ 35 ಸಾವಿರ ಪೌರ ಕಾರ್ಮಿಕರ ನೇಮಕ ಮಾಡುವುದಾಗಿ ಹೇಳಿದ್ದರು. ಕೂಡಲೇ ಅಷ್ಟೂ ಪೌರ ಕಾರ್ಮಿಕರ ನೇಮಕವಾಗಬೇಕು. 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರೆಂಬುದನ್ನು 500 ಜನಸಂಖ್ಯೆಗೆ ಒಬ್ಬ ಎಂದು ಬದಲಿಸಬೇಕು.

ಅಂಬೇಡ್ಕರ್ ದಿನಾಚರಣೆ ಸಂದರ್ಭದಲ್ಲಿ ಪ್ರತಿ ವರ್ಷ ಖಾಯಂ ಪೌರ ಕಾರ್ಮಿಕರಿಗೆ ಬೋನಸ್ ನೀಡಬೇಕು. ಪಿಎಫ್, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಪ್ರತಿ ವಾರ್ಡ್‍ನಲ್ಲಿ ಒಂದೊಂದು ರೆಸ್ಟ್‍ರೂಂ ಮಾಡಬೇಕು. ಅಗತ್ಯ ಸ್ವಚ್ಛತಾ ಸಾಮಗ್ರಿ ನೀಡಬೇಕು ಎಂದು ಪೌರ ಕಾರ್ಮಿಕರು ಆಗ್ರಹಿಸಿದರು.

ಕೆಲಸ ನಿರ್ವಹಿಸುವಾಗ ಅಕಾಲಿಕ ಮರಣ ಸಂಭವಿಸಿದರೆ ನೀಡುವ ಪರಿಹಾರವನ್ನು 5 ಲಕ್ಷ ರೂ.ನಿಂದ 20 ಲಕ್ಷ ರೂ.ಗಳಿಗೆ ಏರಿಸಬೇಕು. ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ನಾರಾಯಣ, ಪೌರ ಕಾರ್ಮಿಕರ , ಮುಖಂಡರಾದ ಮುನಿರಾಜು, ಶ್ರೀನಿವಾಸುಲು ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ