ಬರಪೀಡಿತ ಪ್ರದೇಶದಲ್ಲಿ ನೀರು ಪೂರೈಕೆಗೆ ಒತ್ತು ಕೊಡಿ: ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೀದರ, ನ.15:- ಜಿಲ್ಲೆಯ ನಾಲ್ಕು ಬರಪೀಡಿತ ತಾಲೂಕುಗಳಲ್ಲಿ ನೀರು ಪೂರೈಕೆ ಕ್ರಮಕ್ಕೆ ಮೊದಲ ಆದ್ಯತೆ ಕೊಡಿ. ಯಾವುದೆ ಹಳ್ಳಿಯ ಜನತೆ ನೀರು ಕೊಡಿ ಎಂದು ಕೇಳುತ್ತ ತಮ್ಮಲ್ಲಿ ಬರಬಾರದು. ಈ ಬಗ್ಗೆ ತಾವೆಲ್ಲರೂ ಮುತುವರ್ಜಿ ವಹಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಎಲ್ಲ ಶಾಸಕರಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನ.15ರಂದು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕುಡಿವ ನೀರು ಪೂರೈಕೆ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಕುಡಿವ ನೀರು ಪೂರೈಕೆಗೆ ಕ್ರಮವಹಿಸಲು ತಲಾ 50 ಲಕ್ಷ ರೂ ನೀಡಲಾಗಿದೆ. ಮೊದಲ ಹಂತದಲ್ಲಿ ಈಗಾಗಲೇ 25 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಅವರು ಶಾಸಕರಿಗೆ ಮಾಹಿತಿ ನೀಡಿದರು. ಅಗತ್ಯ ಇರುವ ಕಡೆಗಳಲ್ಲಿ ತಾವುಗಳು ಕೂಡಲೇ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಯವರಿಗೂ ಕೂಡ ಸಿಎಂ ಆದೇಶಿಸಿದರು.
ಈ ವೇಳೆ ಮಾತನಾಡಿದ ಸಹಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ, ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚಿಸಲಾಗಿದೆ. ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೂಡಲೇ ಹೊಸ ಕೊಳವೆಬಾವಿ ಕೊರೆಯಿಸಿ ಕ್ರಮವಹಿಸಲು ಈಗಾಗಲೇ ಡಿಸಿ ಅವರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು. ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಭಾಲ್ಕಿ ತಾಲೂಕಿನಲ್ಲಿ ಕೂಡ ನಡೆಸಬೇಕು ಎಂದು ಅವರು ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಹುಮನಾಬಾದ್ ತಾಲೂಕಿನ ಕೆಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಕುಡಿವ ನೀರಿಗೆ ಕ್ರಿಯಾಯೋಜನೆ: ಶಾಸಕರಾದ ರಹೀಂ ಖಾನ್ ಅವರು ಮಾತನಾಡಿ, ಬೀದರ ನಗರದಲ್ಲಿ ಹಿಂದಿಗಿಂತ ಈ ಬಾರಿ ಕುಡಿವ ನೀರಿನ ಸಮಸ್ಯೆ ತುಸು ಹೆಚ್ಚಿದೆ. ತಾವುಗಳು ಕುಡಿವ ನೀರಿನ ಪೂರೈಕೆಗೆ ವಿಶೇಷ ಪ್ಯಾಕೇಜ್ ನೀಡಿದ್ದು ಸಹಾಯವಾಗಿದೆ ಎಂದು ಮುಖ್ಯಮಂತ್ರಿ ಅವರಿಗೆ ಅಭಿನಂದಿಸಿದರು.
ನಗರದ ಕೆಲವು ಕಡೆಗಳಲ್ಲಿ ಕುಡಿವ ನೀರು ಸಮರ್ಪಕವಾಗಿ ಬರುತ್ತಿಲ್ಲ. ಬೋರವೆಲ್ ಕೊರೆದರು ಕೂಡ ನೀರು ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಸಭೆಗೆ ತಿಳಿಸಿದರು. ಹಳೆಯ ಬೀದರ ಸಿಟಿ ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ನೀರಿನ ಸಮರ್ಪಕ ಪೂರೈಕೆಗಾಗಿ ಕೋಟಿ ರೂ.ದ ಕ್ರಿಯಾಯೋಜನೆಯೊಂದನ್ನು ಸಿದ್ದಪಡಿಸಿ ಕ್ರಮವಹಿಸುತ್ತಿದ್ದೇವೆ ಎಂದು ಸಿಎಂಸಿ ಕಮಿಷನರ್ ಪ್ರತಿಕ್ರಿಯಿಸಿದರು.

ಈ ವೇಳೆ ಜಿಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ಅವರು ಮಾತನಾಡಿ, ಜಿಲೆಯಲ್ಲಿ ಎಲ್ಲಿಯೂ ಕೂಡ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರಿಗೆ ಅಭಿನಂದನೆ: ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಒಂದೇ ಹಂತದಲ್ಲಿ ತಾವು ದಾಖಲೆಯ 45 ಸಾವಿರ ಕೋಟಿ ರೂ.ನಷ್ಟು ರೈತರ ಸಾಲವನ್ನು ಮನ್ನಾ ಮಾಡಿದ್ದಕ್ಕೆ ತಮಗೆ ಅಭಿನಂದನೆಗಳು ಎಂದು ತಿಳಿಸಿದರು.

ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಿಎಸ್‍ಎಸ್‍ಕೆ ಕಾರ್ಖಾನೆಯ ಪುನಾರಂಭಕ್ಕೆ ಕ್ರಮವಹಿಸಬೇಕು. ನಗರೋತ್ಥಾನ ಮತ್ತು ವಸತಿ ಯೋಜನೆ ಸರಿಯಾಗಿ ಅನುಷ್ಠಾನವಾಗಬೇಕು. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು. ಈ ಬಗ್ಗೆ ಡಿಸಿಸಿ ಬ್ಯಾಂಕಿನವರು ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸಿದ್ದಾರೆ ಎಂದು ಸಚಿವರಾದ ಬಂಡೆಪ್ಪ ಖಾಶೆಂಪೂರ ಪ್ರತಿಕ್ರಿಯಿಸಿದರು. ಈ ಯೋಜನೆಯು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.

ಔರಾದ್ ತಾಲೂಕಿನಲ್ಲಿ ಕಮಲನಗರ ಹೊಸ ತಾಲೂಕಾಗಿದೆ. ಅಲ್ಲಿ ಅಧಿಕಾರಿಗಳ ನೇಮಕ ಅಗತ್ಯವಾಗಿ ಆಗಬೇಕಿದೆ. ಔರಾದ್ ಪಟ್ಟಣದಲ್ಲಿ ಕೃಷಿ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣವಾಗಬೇಕಿದೆ ಎಂದು ಔರಾದ್ ಶಾಸಕರಾದ ಪ್ರಭು ಚವ್ಹಾಣ ಅವರು ಸಿಎಂ ಅವರಲ್ಲಿ ಕೋರಿದರು.

ಕಲ್ಯಾಣಕ್ಕೆ ವಿಶೇಷ ಪ್ಯಾಕೇಜ್ ನೀಡಿ: ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಬಿ.ನಾರಾಯಣರಾವ್ ಅವರು ಮಾತನಾಡಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳನ್ನು ತುಂಬಿಸಲು, ರಿಂಗರೋಡ್ ನಿರ್ಮಾಣ, ರಸ್ತೆ, ಕುಡಿವ ನೀರು ಪೂರೈಕೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಕ್ಕಾಗಿ ಒಟ್ಟು ಬಸವಕಲ್ಯಾಣ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ 500 ಕೋಟಿ ರೂ ಕೊಡಬೇಕು. ಅನುಭವ ಮಂಟಪಕ್ಕೆ ಈಗಾಗಲೇ ನಿಗದಿಪಡಿಸಿದ 650 ಕೋಟಿ ರೂ ಪೈಕಿ ಈಗ ಸದ್ಯ 100 ಕೋಟಿ ರೂ. ನೀಡಿ ಅದಕ್ಕೆ ತಮ್ಮ ಅವಧಿಯಲ್ಲಿ ಅಡಿಗಲ್ಲು ನೆರವೇರಿಸಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಮೀನುಗಾರಿಕೆ ಹಾಗೂ ಪಶುಪಾಲನಾ ಇಲಾಖೆ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭಾರತಬಾಯಿ ಮಲ್ಲಿನಾಥ ಶೇರಿಕಾರ, ಸಂಸದರಾದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಜಿಪಂ ಉಪಾಧ್ಯಕ್ಷರಾದ ಡಾ.ಪ್ರಕಾಶ ಪಾಟೀಲ, ಈಶಾನ್ಯ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಮನೀಷ್ ಖರ್ಬಿಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಬೀದರ ಹಾಗೂ ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಟಿ.ಶ್ರೀಧರ, ಎನ್.ಶಶಿಕುಮಾರ ಹಾಗು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ