ಬೆಂಗಳೂರು, ನ.15- ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು 5 ಲಕ್ಷ ರೂ.ವರೆಗೂ ಹೆಚ್ಚಿಸಲಾಗಿದ್ದು, ಈ ಯೋಜನೆಯಲ್ಲಿ ಕಾರ್ಡ್ ಇಲ್ಲದೇ ಇದ್ದರೂ ಸೂಕ್ತ ದಾಖಲೆ ನೀಡಿ ಬಿಪಿಎಲ್ ಕುಟುಂಬದವರು ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನವನ್ನು ಸುಮಾರು ಆರು ಲಕ್ಷ ಕುಟುಂಬಗಳಿಗೆ ನೀಡುತ್ತಿದೆ. ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ 1.20 ಲಕ್ಷ ಕುಟುಂಬಗಳಿಗೆ ಸುಮಾರು 4.4 ಕೋಟಿ ಜನರಿಗೆ ಜಾರಿಗೆಯಾಗುತ್ತಿದೆ. ರಾಜ್ಯದ 531 ಖಾಸಗಿ ಆಸ್ಪತ್ರೆ, 385 ಸರ್ಕಾರಿ ಆಸ್ಪತ್ರೆ ಸೇರಿ 916 ಜತೆಗೆ ನೆರೆ ರಾಜ್ಯಗಳ 36 ಆಸ್ಪತ್ರೆಗಳಲ್ಲೂ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು. ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 5 ಲಕ್ಷದವರೆಗೂ ಬಿಪಿಎಲ್ ಕಾರ್ಡ್ದಾರರು ಮತ್ತು ಬಡ ಕುಟುಂಬದವರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದರು.
ಎಪಿಎಲ್ ಕಾರ್ಡ್ ಕುಟುಂಬಗಳಿಗೆ ಚಿಕಿತ್ಸೆ ವೆಚ್ಚದ ಶೇ.30ರಷ್ಟು ಗರಿಷ್ಠ ಒಂದೂವರೆ ಲಕ್ಷದವರೆಗೂ ಚಿಕಿತ್ಸಾ ವೆಚ್ಚವನ್ನು ನೀಡಲಿದೆ. ಈ ಮೊದಲು ಈ ಯೋಜನೆಯಡಿಯಲ್ಲಿ 1514 ಕಾಯಿಲೆಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಸಣ್ಣಪುಟ್ಟ ಚಿಕಿತ್ಸೆಗಳನ್ನು ತೆಗೆಯಲಾಗಿದ್ದು, ಹೊಸದಾಗಿ 630 ಕಾಯಿಲೆಗಳನ್ನು ಸೇರ್ಪಡೆ ಮಾಡಿ ಒಟ್ಟು 1614 ರೀತಿಯ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿ ಖಾಸಗಿ ಆಸ್ಪತ್ರೆ ಜತೆ ಅಕ್ಟೋಬರ್ 30ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಿನ್ನೆ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲಾಗಿದೆ. ಸರ್ಕಾರ ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೂ ಸೂಕ್ತ ಸೂಚನೆ ನೀಡಲಾಗಿದೆ. ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಹೊಂದಿಲ್ಲದೇ ಇದ್ದರೂ ರೋಗಿಗಳು ತಮ್ಮ ಗುರುತಿನ ಪತ್ರ ಮತ್ತು ಬಿಪಿಎಲ್ ಕಾರ್ಡ್ನ್ನು ತೆಗೆದುಕೊಂಡು ಯೋಜನೆಯಡಿ ಚಿಕಿತ್ಸೆ ಪಡೆಯಬಹುದು ಎಂದರು.
ಆಸ್ಪತ್ರೆಗೆ ದಾಖಲಾದ ನಂತರವೂ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಈ ಯೋಜನೆಯ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು. ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸಿದರೆ ಸಾರ್ವಜನಿಕರ ದೂರು ಸ್ವೀಕರಿಸಲು ಸೂಕ್ತ ಪ್ರಾಧಿಕಾರಗಳನ್ನು ರಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆಯ ಲಾಭ ಪಡೆಯುವ ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಸೂಕ್ತ ಚಿಕಿತ್ಸೆ, ಸೌಲಭ್ಯ ಇಲ್ಲದಿದ್ದರೆ ಅಲ್ಲಿಂದ ಶಿಫಾರಸು ಪತ್ರ ಪಡೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಏಕಾಏಕಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸರ್ಕಾರ ವೆಚ್ಚ ಭರಿಸುವುದಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋದ ನಂತರವೇ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು ಎಂಬ ನಿಯಮವಿಲ್ಲ. 169 ಮಾದರಿಯ ತುರ್ತು ಚಿಕಿತ್ಸೆಗಳಿಗೆ ನೇರವಾಗಿಯೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಬಹುದು. ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದ ದುಬಾರಿ ವೆಚ್ಚವನ್ನೂ ಕೂಡ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಮರುಪಾವತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದಲ್ಲಿ 2391 ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಜನರಲ್ಲಿ ಕಾರ್ಡ್ ಇಲ್ಲ. ಚಿಕಿತ್ಸೆ ಸಿಗುವುದಿಲ್ಲ ಎಂಬ ಗೊಂದಲ ಇದೆ. ಅಂತಹ ಗೊಂದಲಗಳು ಅನಗತ್ಯ. ಆರಂಭದಲ್ಲಿ ಗುರುತಿನ ಪತ್ರ ಮತ್ತು ಬಿಪಿಎಲ್ ಕಾರ್ಡ್ ಇದ್ದರೆ ಸಾಕು. ಇಲ್ಲಿ ಎಲ್ಲರೂ ಸೌಲಭ್ಯ ಪಡೆಯಬಹುದು ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ವಿವಿಧ ಆರೋಗ್ಯ ವಿಮಾ ಯೋಜನೆಯನ್ನು ಸಮೀಕರಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗಿದೆ. 2.35ಲಕ್ಷ ದಷ್ಟಿದ್ದ ಚಿಕಿತ್ಸಾ ವೆಚ್ಚವನ್ನು 5ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.