ವಿಧಾನಮಂಡಲ ತರಬೇತಿ ಶಿಬಿರಕ್ಕೆ ಶಾಸಕರ ನಿರಾಸಕ್ತಿ

ಬೆಂಗಳೂರು, ನ.15- ವಿಧಾನಸಭೆ ಮತ್ತು ವಿಧಾನಪರಿಷತ್‍ಗೆ ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರಿಗಾಗಿ ಕರ್ನಾಟಕ ವಿಧಾನಮಂಡಲ ತರಬೇತಿ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣುತ್ತಿತ್ತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಹಾಜರಾಗಿದ್ದರು. ನಂತರ ಒಬ್ಬರಾಗಿಯೇ ಬರಲಾರಂಭಿಸಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು ಪ್ರಜಾಪ್ರಭುತ್ವದ ಮಹತ್ವ ಮತ್ತು ಭಾರತ ಸಂವಿಧಾನದ ಆಶಯಗಳು, ಶಾಸನ ರಚನೆ, ಪಾತ್ರ ಕುರಿತು ಮಾತನಾಡುವ ಸಂದರ್ಭದ ವೇಳೆಗೆ ಸುಮಾರು 8 ಮಂದಿ ವಿಧಾನಪರಿಷತ್ ಸದಸ್ಯರು, 26 ಮಂದಿ ಶಾಸಕರು ಹಾಜರಿದ್ದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತರಬೇತಿ ನಡೆಯಲಿದೆ.

ವಿಧಾನಸಭೆಯ 61, ವಿಧಾನಪರಿಷತ್‍ನ 17 ಸದಸ್ಯರು ಸೇರಿದಂತೆ ಒಟ್ಟು 78 ಮಂದಿ ನೂತನವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆ ಮತ್ತು ಪರಿಷತ್‍ನ ಕಾರ್ಯಕಲಾಪಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದೆ.
ಶಿಬಿರ ಉದ್ಘಾಟನಾ ಸಂದರ್ಭದಲ್ಲಿ ಸುಮಾರು 34 ಮಂದಿಯಷ್ಟೆ ಉಭಯ ಸದನಗಳ ಸದಸ್ಯರು ಹಾಜರಿದ್ದರು. ಶೇ.50ರಷ್ಟು ಕೂಡ ಹಾಜರಾತಿ ಕಂಡು ಬರಲಿಲ್ಲ.

ಉದ್ಘಾಟನಾ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಬೆಳ್ಳಿ ಪ್ರಕಾಶ್, ಬಸವರಾಜ್ ಮುತ್ತಿಮಡು, ಸಂಜೀವ್ ಮಟಂದೂರು, ಸಂತೋಷ್ ನಾಯಕ್, ಲಿಂಗೇಶ್, ರಾಜೇಶ್ ನಾಯಕ್, ರಾಜ ವೆಂಕಟಪ್ಪ ನಾಯಕ್, ಉಮೇಶ್ ಜಾದವ್, ಪೂರ್ಣಿಮಾ, ಅಂಜಲಿ ಹೇಮಂತ್ ಲಿಂಬಾಳ್ಕರ್, ಎಂ.ನಿಂಬಣ್ಣನವರ್, ಅಶೋಕ್ ನಾಯಕ್, ಬಸವರಾಜ್ ದೊಡ್ಡತೋಗೂರ್, ಬಸನಗೌಡ, ಡಾ.ದೇವಾನಂದ್ ಚೌವ್ಹಾಣ್, ದೊಡ್ಡನಗೌಡ ಮಹಂತೇಶ್, ಹರೀಶ್, ಹರ್ಷವರ್ಧನ, ಗೌರಿಗಣೇಶ್, ಲಕ್ಷ್ಮೀಹೆಬ್ಬಾಳ್ಕರ್, ಮಂಜುನಾಥ್, ನಾಗನಗೌಡ ಚಂದ್ರಸೂರ್, ರೂಪಕಲಾ, ಸೀಮಂತ್ ಪಾಟೀಲ್, ರೂಪಾಲಿ, ಉದಯ್ ಗರುಡಾಚಾರ್ ಹಾಗೂ ಮಸಲಾ ಜಯರಾಂ ಪಾಲ್ಗೊಂಡಿದ್ದರು.

ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಮೋಹನ್ ಕುಮಾರ್ ಕೊಂಡಜ್ಜಿ, ಪ್ರಾಣೇಶ್, ವೆಂಕಟೇಶ್, ಟಿ.ಎ.ಶರವಣ, ಜಯಮ್ಮ, ನಾರಾಯಣಸ್ವಾಮಿ, ಭೋಜೇಗೌಡ ಉಪಸ್ಥಿತರಿದ್ದರು. ಒಟ್ಟಾರೆ 34 ಮಂದಿ ಸದಸ್ಯರು ಹಾಜರಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್, ತಾವು ಸ್ಪರ್ಧೆ ಮಾಡಿದ ಚುನಾವಣೆಗಳಲ್ಲಿ ಗೆದ್ದಿದ್ದಕ್ಕಿಂತಲೂ ಸೋತಿದ್ದೇ ಹೆಚ್ಚು. ಗೆದ್ದು ಬರಲು ಏನು ಮಾಡಬೇಕು ಎಂಬುದನ್ನು ನೀವೇ ಹೇಳಿಕೊಡಬೇಕು. ಶಾಸಕರಾಗಿ ಆಯ್ಕೆಯಾಗಿ ಬಂದ ನಂತರ ಯಾವ ಕಾರ್ಯ ಮಾಡಬೇಕು ಎಂಬುದನ್ನು ನಾನು ಹೇಳಿಕೊಡುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ