ಬೆಂಗಳೂರು, ನ.13-ಪಕ್ಷಕ್ಕೆ ನೈತಿಕ ಬಲ ತುಂಬಿ ವಿಪಕ್ಷಗಳ ವಿರುದ್ಧ ಹೋರಾಟ ಮಾಡಲು ಅನುಕೂಲವಾಗುವಂತೆ ಮಾಹಿತಿ ಹಾಗೂ ಸರಕುಗಳನ್ನು ಒದಗಿಸಲು ಎಐಸಿಸಿ ಸಂಶೋಧನಾ ವಿಭಾಗವೊಂದನ್ನು ಆರಂಭಿಸಿದೆ.
ದೇಶದ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳಲ್ಲೂ ಸಂಶೋಧನಾ ತಂಡಗಳನ್ನು ಆರಂಭಿಸಲಾಗಿದ್ದು, ಅದೇ ರೀತಿ ಕರ್ನಾಟಕದ ಕಾಂಗ್ರೆಸ್‍ನ ಸಂಶೋಧನಾ ತಂಡಕ್ಕೆ ಮನ್‍ಸೂರ್ ಆಲಿಖಾನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಹಾರದ ಸಂಶೋಧನಾ ತಂಡಕ್ಕೆ ಆನಂದ್ ಮದಾಬ್ ಅವರನ್ನು ಇದೇ ವೇಳೆ ನೇಮಕಾತಿ ಮಾಡಲಾಗಿದೆ.
ಹೊಸದಾಗಿ ಸೃಷ್ಟಿಸಿರುವ ಸಂಶೋಧನಾ ಘಟಕ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕೆಲಸ ಮಾಡಲಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳು, ಹಗರಣಗಳ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಲಿದೆ. ಜತೆಗೆ ಕಾಂಗ್ರೆಸ್‍ನ ಕೊಡುಗೆಗಳ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಒದಗಿಸಿ ಸೋಸಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಷನ್‍ಗೆ ಹೋಗುವ ನಾಯಕರಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು ಈ ಘಟಕದ ಕೆಲಸವಾಗಿದೆ.
ಈ ಮೊದಲು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಮಾಧ್ಯಮಗಳ ಚರ್ಚೆಗೆ ಹೋಗಿ ಬಹಳಷ್ಟು ಮುಖಂಡರು ಪೇಚೆಗೆ ಸಿಲುಕಿರುವ ಉದಾಹರಣೆಗಳಿವೆ. ಇದರಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗುತ್ತದೆ. ಇದನ್ನು ತಪ್ಪಿಸಲು ಹೊಸದಾಗಿ ಸಂಶೋಧನಾ ಘಟಕವನ್ನು ಹೈಕಮಾಂಡ್ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳಲ್ಲೂ ಸ್ಥಾಪಿಸಿದೆ.