ಅಂತರ್ಜಲ ಹೆಚ್ಚಳ ಹಾಗೂ ಕೆರೆ ಹೂಳು ತೆಗೆಯಲು ಹೆಚ್ಚುವರಿ ಮೂರು ಸಾವಿರ ಕೋಟಿ ರೂಗೆ ಸಿಎಂಗೆ ಮನವಿ

ಬೆಂಗಳೂರು, ನ.13- ತಮ್ಮ ಇಲಾಖೆಯ ಅಂತರ್ಜಲ ಹೆಚ್ಚಳ ಹಾಗೂ ಕೆರೆ ಹೂಳು ತೆಗೆಯುವ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ನೀಡುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಗೆ ರಾಜ್ಯ ಬಜೆಟ್‍ನಲ್ಲಿ ಎರಡು ಸಾವಿರ ಕೋಟಿಯನ್ನು ಈಗಾಗಲೆ ಒದಗಿಸಲಾಗಿದೆ. ರಾಜ್ಯದಲ್ಲಿ ಅಂತರ್ಜಲ ಹೆಚ್ಚಳ ಹಾಗೂ ಕೆರೆಗಳ ಹೂಳೆತ್ತುವ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ಅಗತ್ಯವಿರುವ ಹಣ ನೀಡಲು ಮನವಿ ಮಾಡಲಾಗಿದೆ ಎಂದರು.
ಮೂವತ್ತು ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಬ್ಯಾರೆಜ್ ಕಂ ಚೆಕ್‍ಡ್ಯಾಮ್ ಮೂಲಕ ಹರಿಯುವ ನೀರಿಗೆ ತಡೆಹೊಡ್ಡಿ ಅಂತರ್ಜಲ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿ ಕಾರ್ಯಕ್ರಮಗಳು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಇಲಾಖೆ ವ್ಯಾಪ್ತಿಗೆ ಬರುವ 3600 ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಕಳೆದ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದು ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾದರೆ, ಸಣ್ಣ ನೀರಾವರಿ ಸಚಿವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಾಧಿಕಾರಕ್ಕೆ ಪರಿಣಿತರನ್ನು ನೇಮಕ ಮಾಡಲಾಗುವುದು. ಅದರಲ್ಲಿ ನಿವೃತ್ತ ಇಂಜನಿಯರ್ ಹಾಗೂ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿಗಳು ಸದಸ್ಯರಾಗಿ ನೇಮಕವಾಗುವರು ಎಂದು ವಿವರಿಸಿದರು.

ನಾಡು ಉಳಿಯಲು ಕೆರೆಗಳು ಉಳಿಯಬೇಕು. ಈ ಹಿನ್ನೆಲೆಯಲ್ಲಿ ಕೆರೆ ಸರ್ವೆ ನಡೆಸಲಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೆರೆಗಳ ಒತ್ತುವರಿ ತೆರವನ್ನು ಮುಲಾಜಿಲ್ಲದೆ ನಡೆಸಲು ತಿಳಿಸಲಾಗಿದೆ.

ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಕೆರೆ ಸಹಕಾರ ಸಂಘಗಳು ಸಕ್ರಿಯವಾಗಿದ್ದು, ಇಂತಹ ಸಂಘಗಳಿಗೆ 50ರಿಂದ ಒಂದು ಲಕ್ಷ ರೂ. ನೆರವು ನೀಡಲಾಗುತ್ತದೆ. ಶೀಘ್ರದಲ್ಲೇ ಈ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಹಕಾರ ಸಂಘಗಳ ಈ ಯೋಜನೆಗೆ 7ರಿಂದ 8 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದರು.

ಗ್ರಾಪಂನಿಂದ ನಗರಸಭೆವರೆಗೂ ಆಯಾ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಯ ಅಭಿವೃದ್ಧಿಗೆ ಆಯಾ ಇಲಾಖೆಗಳು ಕ್ರಮ ವಹಿಸಲಿವೆ. ಮೈಸೂರಿನ ಹೆಬ್ಬಾಳ ಕೆರೆಯನ್ನು ಇನ್ಫೋಸಿಸ್ ಅಭಿವೃದ್ಧಿಪಡಿಸಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಖಾಸಗಿ ಕಂಪೆನಿಗಳು ಮುಂದಾಗಿವೆ. ನಗರದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿದ್ದರೆ ಅಂತಹಗಳ ಕೆರೆಗಳ ಒತ್ತುವರಿ ತೆರವಿಗೆ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗುವುದು. ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಹಾಗೂ ಕೆ.ಬಿ.ಕೋಳಿವಾಡ ನೇತೃತ್ವದ ಕೆರೆ ಸಂರಕ್ಷಣಾ ಸದನ ಸಮಿತಿಯ ವರದಿಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಮೂರು ಬಾರಿಗೆ ಮುಖ್ಯಮಂತ್ರಿ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದ್ದಾರೆ ಎಂದು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ