ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗಿದ್ದ ಅನಂತ್ ಕುಮಾರ್

ಬೆಂಗಳೂರು, ನ.12- ಕ್ಯಾನ್ಸರ್ ರೋಗದಿಂದ ಇಂದು ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು.
ನಾಡು, ನುಡಿ, ಭಾಷೆ, ಸಾಹಿತ್ಯ, ಜಲ ಸೇರಿದಂತೆ ಯಾವುದೇ ವಿಷಯದಲ್ಲೂ ಸಂಸತ್ತಿನಲ್ಲಿ ಮುಂಚೂಣಿಯಲ್ಲಿ ನಿಂತು ರಾಜ್ಯಕ್ಕೆ ನ್ಯಾಯ ಒದಗಿಸಿಕೊಡುವುದರಲ್ಲಿ ಅವರ ಪಾತ್ರ ಪ್ರಮುಖವಾಗಿರುತ್ತಿತ್ತು. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರಾಜ್ಯಕ್ಕೆ ಸಿಗಬೇಕಾದ ಯೋಜನೆಗಳನ್ನು ಮಂಜೂರು ಮಾಡಿಸುವಲ್ಲಿಯೂ ಅವರು ಸಿದ್ಧಹಸ್ತರಾಗಿದ್ದರು.

1996ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿ ಮೊದಲ ಅವಧಿಯಲ್ಲೇ ಎಲ್ಲಾ ಪಕ್ಷದವರ ಗಮನ ಸೆಳೆದಿದ್ದರು. ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಅನಂತ್ ಕುಮಾರ್ ಮುಂದೊಂದು ದಿನ ಚಾಣಾಕ್ಷ ರಾಜಕಾರಣಿಯಾಗಿ ಬೆಳೆಯುತ್ತಾರೆ ಎಂದು ಅವರ ರಾಜಕೀಯ ಗುರು ಎಲ್.ಕೆ.ಅಡ್ವಾಣಿ ಗುರುತಿಸಿದ್ದರು.

ಕೇಂದ್ರದಲ್ಲಿ ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್, ಮನಮೋಹನ್ ಸಿಂಗ್ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತಮಗಿರುವ ಪ್ರಭಾವವನ್ನು ಬಳಸಿಕೊಂಡು ರಾಜ್ಯಕ್ಕೆ ಸಿಗಬೇಕಾದ ಸವಲತ್ತು, ಯೋಜನೆಗಳನ್ನು ಜಾರಿ ಮಾಡಿಸುವಲ್ಲಿ ಅನಂತ್ ಕುಮಾರ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಲೋಕಸಭೆಯಲ್ಲಿ ಕ್ಯಾತೆ ತೆಗೆದಾಗ ಅಲ್ಲಿ ಕರ್ನಾಟಕದ ಎಲ್ಲಾ ಸಂಸದರನ್ನು ಒಗ್ಗೂಡಿಸಿ ರಾಜ್ಯದ ಪರ ಹೋರಾಟಕ್ಕೆ ಧುಮುಕುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಒತ್ತಡ ಹಾಕಿದಾಗ ಅನಂತ್‍ಕುಮಾರ್ ಪ್ರಧಾನಿಯವರ ಮೇಲೆ ಒತ್ತಡ ಹಾಕಿ ಸಮಸ್ಯೆಯನ್ನು ಪರಿಹರಿಸಿದ್ದರು.

ಕಳೆದ ವರ್ಷ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಾಗ ತಕ್ಷಣವೇ ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ ಸಮಸ್ಯೆಯನ್ನು ಪರಿಹರಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದರು.

ಕರ್ನಾಟಕದ ಮಟ್ಟಿಗೆ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಅನಂತ್ ಕುಮಾರ್ ಸಂಸತ್‍ನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದರು. ಪ್ರತಿ ಬಾರಿ ಲೋಕಸಭೆಗೆ ಆಯ್ಕೆಯಾದ ಮೇಲೆ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕಡತಕ್ಕೂ ಕನ್ನಡದಲ್ಲೆ ಸಹಿ ಹಾಕಿ ತಮಗಿರುವ ಮಾತೃಭಾಷಾ ಪ್ರೇಮವನ್ನು ಸಾಬೀತುಪಡಿಸುತ್ತಿದ್ದರು.

ಸಂಸತ್‍ನ ಹಾಲ್‍ನಲ್ಲಿ ಕನ್ನಡ ಕಾರ್ನರ್ ಸ್ಥಾಪಿಸಿ ಇಲ್ಲಿ ಕನ್ನಡದ ಕಲರವವನ್ನು ಹರಡಿದ್ದರು. ಕನ್ನಡ ಪುಸ್ತಕಗಳು, ದಿನಪತ್ರಿಕೆಗಳು, ಕಾದಂಬರಿಗಳು, ವಚನಗಳು ಸೇರಿದಂತೆ ಕನ್ನಡದ ಸುಪ್ರಸಿದ್ಧ ಕೃತಿಗಳನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸಂಸತ್‍ನ ಹಾಲ್‍ನಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿಸಿಕೊಡುವಲ್ಲಿಯೂ ಅನಂತ್ ಕುಮಾರ್ ಪಾತ್ರ ಮಹತ್ವದ್ದು.
ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಅನಂತ್ ಕುಮಾರ್ ಹಠಾತ್ ನಿಧನ ಕೇವಲ ಬಿಜೆಪಿಗೆ ಮಾತ್ರವಲ್ಲದೆ ರಾಜ್ಯಕ್ಕೂ ತುಂಬಲಾರದ ನಷ್ಟ ಎಂದರೂ ತಪ್ಪಾಗಲಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ