
ಬೆಂಗಳೂರು: ಸ್ವಿಡ್ಜರ್ ಲ್ಯಾಂಡಿನಲ್ಲಿ “ಅಮರ್” ಚಿತ್ರತಂಡ ತಮ್ಮ ಚಿತ್ರದ ದ್ವಿತೀಯಾರ್ಧದ ಶೂಟಿಂಗ್ ನಲ್ಲಿ ತೊಡಗಿದೆ. ಅಲ್ಲಿ ಚಿತ್ರತಂಡಕ್ಕೆ ಅತ್ಯಂತ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ.
ಚಿತ್ರದ ಪ್ರಮುಖ ನಟರಾದ ಅಭಿಷೇಕ್ ಹಾಗೂ ತಾನ್ಯಾ ಹೋಪೆ ಅಲ್ಲಿನ ಐದು ಡಿಗ್ರಿ ತಾಪಮಾನವಿರುವ ಶೀತಲ ವಾತಾವರಣದಲ್ಲೇ ಹಾಡು ಹಾಗೂ ಕೆಲ ದೃಶ್ಯಗಳ ಚಿತ್ರೀಕರಣ ನಡೆಸಿದ್ದಾರೆ.
“ತಾನ್ಯಾ ಅವರಿಗೆ ಅವರು ಧರಿಸಿದ ಉಡುಪಿನ ಕಾರಣ ಇಂತಹಾ ವಾತಾವರಣದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುವುದು ಅತ್ಯಂತ ಕಠಿಣವಾಗಿತ್ತು.ಅವರು ಶೀತಲ ವಾತಾವರಣದಿಂದ ಉಸಿರಾಡುವುದಕ್ಕೆ ಸಹ ಕಷ್ಟಪಟ್ಟರು” ಚಿತ್ರತಂಡ ಅತ್ಯಂತ ವಿಷಮ ಪರಿಸ್ಥಿತಿ ಅನುಭವಿಸಿದ್ದಾಗಿ ತಂಡದ ಓರ್ವ ಸದಸ್ಯ ಹೇಳಿದ್ದಾರೆ.
ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಬಹುದೊಡ್ಡ ತಾರಾಬಳಗವಿರುವ ನಾಗಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆಲ್ಫ್ ಪರ್ವತ ಶ್ರೇಣಿಗಳಲ್ಲಿ ನವೆಂಬರ್ 18ರವರೆಗೆ ನಡೆಯಲಿದೆ. ಇದಾದ ಬಳಿಕ ಬೆಂಗಳೂರಿಗೆ ಹಿಂತಿರುಗಲಿರುವ ಚಿತ್ರತಂಡ ಡಿಸೆಂಬರ್ 15ಕ್ಕೆ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆ.
ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.ಸುಧಾರಾಣಿ, ನಿರೂಪ್ ಭಂಡಾರಿ, ರಚಿತಾ ರಾಮ್ ಸಹ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.