ಮತದಾನಕ್ಕೂ ಮುನ್ನ ರೆಡ್ಡಿ, ರಾಮುಲು ಸೈಲೆಂಟಾಗಿದ್ದೇಕೆ? ಬಿಜೆಪಿ ಹೈಕಮಾಂಡ್​ಗೆ ರೆಡ್ಡಿ ಕೊಟ್ಟ ಸಂದೇಶವೇನು?

ಬಳ್ಳಾರಿ: ಬಳ್ಳಾರಿಗೆ ಗಣಿ ಧಣಿ ಜನಾರ್ದನ ರೆಡ್ಡಿ ಅನಿವಾರ್ಯವಾ? ಹೀಗೊಂದು ಪ್ರಶ್ನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಉದ್ಭವವಾಗಿತ್ತು. ಅದೀಗ ಲೋಕಸಭಾ ಉಪ ಚುನಾವಣೆಯಲ್ಲಿ ಗೋಚರಿಸುತ್ತಿದೆ. ನಾಳೆ ಬರುವ ಫಲಿತಾಂಶದಿಂದ ಅದು ಇನ್ನಷ್ಟು ಸ್ಪಷ್ಟವಾಗಿ ಸಂದೇಶ ರವಾನೆಯಾಗಲಿದೆ. ಈ ಕಾರಣಕ್ಕಾಗಿಯೇ ಮತದಾನಕ್ಕೂ ಹಿಂದಿನ ಎರಡು ದಿನಗಳಲ್ಲಿ ರೆಡ್ಡಿ-ರಾಮುಲು ಪಡೆ ಫುಲ್ ಸೈಲೆಂಟಾಗಿದ್ದರಾ? ಎಂಬ ಪ್ರಶ್ನೆ ನಾಯಕರನ್ನು ಬಹುವಾಗಿ ಕಾಡುತ್ತಿದೆ!
ಗಣಿನಾಡು ಬಳ್ಳಾರಿಯಲ್ಲಿ ಸದ್ಯ ಶ್ರೀರಾಮುಲು-ರೆಡ್ಡಿ ಸಹೋದರರ ಪಡೆ ಫುಲ್ ಸೈಲೆಂಟಾಗಿದೆ. ಪ್ರಚಾರದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯುವಂತೆ ಏಕಾಂಗಿಯಾಗಿ ಶ್ರೀರಾಮುಲು ತಂಗಿ ಜೆ ಶಾಂತಾ ಪರ ಪ್ರಚಾರ ಮಾಡಿದರಾದ್ರೂ ಮತದಾನ ನಡೆಯುವ ಮುನ್ನ ಎರಡು ದಿನಗಳಲ್ಲಿ ಫುಲ್ ಸೈಲೆಂಟಾಗಿದ್ದರು. ಇದು ರೆಡ್ಡಿ-ರಾಮುಲು ಪರವಾಗಿ, ಬಿಜೆಪಿ ಪಕ್ಷದ ಪರವಾಗಿ ಬೆಂಬಲಕ್ಕೆ ನಿಂತ ಕಾರ್ಯಕರ್ತರು, ಮುಖಂಡರಿಗೆ ಅತಿ ದೊಡ್ಡ ಶಾಕ್ ನೀಡಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ನೆಕ್ ಟು ನೆಕ್ ಪ್ರಚಾರ ನಡೆದಿದೆ. ಚುನಾವಣಾ ಸಾರಥ್ಯ ವಹಿಸಿದ್ದ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದ ಸದಸ್ಯರನ್ನೆಲ್ಲ ಕರೆಸಿ ಸಮುದಾಯಕ್ಕೊಬ್ಬ ಮುಖಂಡರ ಮೂಲಕ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ, ರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಮರು ವಾಗ್ದಾಳಿ ನಡೆಸಿದ್ದರು. ಆದರೆ ಮತದಾನ ಮುಂಚಿನ ಕತ್ತಲ ರಾತ್ರಿ ಎನ್ನುವ ಆ ಎರಡು ದಿನಗಳ ಅಸಲಿ ಆಟದಲ್ಲಿ ರೆಡ್ಡಿ-ರಾಮುಲು ಪಡೆ ಫುಲ್ ಸೈಲೆಂಟಾದ್ರು.
ಹೌದು. ಬಳ್ಳಾರಿಗೆ ಗಣಿಧಣಿ ಅನಿವಾರ್ಯ. ರಾಮುಲು ಜನ ಬಲವಿದ್ದರೂ ಹಣಬಲವಿಲ್ಲದೆ ಬಳ್ಳಾರಿ ಜಿಲ್ಲಾ ಬಿಜೆಪಿ ಸೊರಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಉಪಸ್ಥಿತಿ ತೋರಿಸಲು ಈ ಉಪ ಚುನಾವಣೆ ನಡೆಯಿತೇ ಎಂಬ ಮಾತು ದಟ್ಟವಾಗಿ ಪಕ್ಷದ ಮುಖಂಡರಲ್ಲಿ ಕೇಳಿಬರುತ್ತಿದೆ. ರಾಮುಲು ಜನಬಲದ ಟೆಸ್ಟಿಂಗ್ ಮಾಡಲು ಸಾಕ್ಷಿಯಾದಂತಾಗಿದೆ ಈ ಬಳ್ಳಾರಿ ಲೋಕಾಸಭಾ ಉಪ ಚುನಾವಣೆ. ಈ ಮೊದಲೆಲ್ಲ ಬಳ್ಳಾರಿ ಚುನಾವಣೆ ಹಣದಿಂದಲೇ ನಡೆಯುತ್ತಿತ್ತು. ಜನರಿಗೆ ದುಡ್ಡಿನ ರುಚಿ ತೋರಿಸಿದ್ದೇ ರೆಡ್ಡಿಪಡೆ. ಈ ಮಾತನ್ನು ಯಾರೂ ತಳ್ಳಿಹಾಕುವಂತಿಲ್ಲ. ಇಂಥ ರೆಡ್ಡಿ ಪಡೆಯೇ ಇದೀಗ ‘ಆ’ ಬಲವಿಲ್ಲದೆ ಸೊರಗಿದೆ ಎಂಬಂತೆ ಈ ಚುನಾವಣೆಯಲ್ಲಿ ಭಾಸವಾಯಿತು.
ಈ ಬಾರಿ ಚುನಾವಣೆಯಲ್ಲಿ ರೆಡ್ಡಿ ದುಡ್ಡು ಬಿಚ್ಚಲಿಲ್ಲ, ಮೊದಲಿನ ಖದರ್ ತೋರಿಸಲಿಲ್ಲ. ಪ್ರತಿ ಚುನಾವಣೆಯಲ್ಲಿ ರೆಡ್ಡಿ ಖದರ್ ನೋಡಿದವರಿಗೆ ಈ ಬಾರಿ ಶಾಕ್​ಗೆ ಒಳಗಾಗಿದ್ದಾರೆ. ಕತ್ತಲ ರಾತ್ರಿಯಲ್ಲಿ ಬಲವಿಲ್ಲದೆ ರೆಡ್ಡಿ-ರಾಮುಲು ಪಡೆಯ ಬೆಂಬಲಿಗರು ಕಂಗಾಲಾಗಿದ್ದಾರೆ. ಡಿಕೆಶಿ ಪಡೆ ಸಹಜವಾಗಿ ಮೆಲುಗೈ ಸಾಧಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಬಳ್ಳಾರಿಗೆ ಬಾರದೇ ಹೋದರೂ ಅಷ್ಟೋ-ಇಷ್ಟೋ ಗತ್ತುಗಮ್ಮತ್ತು ಪ್ರದರ್ಶನವಾಗಿತ್ತು. ಆದರೆ ಈ ಬಾರಿ ರೆಡ್ಡಿ ಗಪ್ ಚುಪ್, ಕೈಕಟ್ ಎಂಬಂತಾಗಿದೆ. ಕೇವಲ ಗಡಿಭಾಗದಲ್ಲಿ ರಾಮುಲು ಪರ ಹೇಳಿಕೆ ನೀಡಿ ಸುಮ್ಮನಾಗಿಬಿಟ್ಟರು. ರಾಮುಲು ಏಕಾಂಗಿಯಾಗಿದ್ದಾರೆ ಎಂದು ರೆಡ್ಡಿ ಗಡಿಭಾಗದಲ್ಲಿ ಹೇಳಿಕೆ ನೀಡಿದರೆ, ಮತದಾನ ಮುನ್ನ ಹಾಗೂ ಮತದಾನದ ದಿನವೂ ಶ್ರೀರಾಮುಲು ‘ಜನರಿಗೆ ಹಣ ಕೊಟ್ಟು ಓಟು ಕೊಂಡುಕೊಳ್ಳಲು ಬಂದಿದ್ದಾರೆ ಎಂದು ಹೋದಲ್ಲೆಲ್ಲ ಪ್ರಚಾರದ ವೇಳೆ, ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿಯೂ ಇದೇ ಹೇಳಿಕೆಯನ್ನು ನೀಡಿದ್ದಾರೆ.
ಪ್ರಚಾರದಲ್ಲಿ ಜೋಷ್ ಇದ್ದರೂ ಆರ್ಥಿಕ ಬಲವಿಲ್ಲದೆ ಬಿಜೆಪಿ ಬಳ್ಳಾರಿಯಲ್ಲಿ ಸೊರಗಿತ್ತು. ಇದೆಲ್ಲ ನೋಡುತ್ತಿದ್ದರೆ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡಲು ರೆಡ್ಡಿಗಾರು ಸೈಲೆಂಟಾದ್ರಾ ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತಿದೆ. ರೆಡ್ಡಿಯಿಲ್ಲದೆ ಬಳ್ಳಾರಿಯಲ್ಲಿ ಬಿಜೆಪಿಯಿಲ್ಲ ಎನ್ನುವುದು ತೋರಿಸಲಿಕ್ಕಾಗಿಯೇ? ಇಲ್ಲವೇ ರೆಡ್ಡಿಯಿದ್ದರೆ ಎಲ್ಲವೂ ಸಾಧ್ಯ, ಅವರಿದ್ದರೆ ಗೆಲುವು ಸುಲಭವಾಗುತ್ತಿತ್ತು ಎನ್ನುವ ಸಂದೇಶ ಹೈಕಮಾಂಡ್ ಗೆ ಹೋಗಬೇಕಾಗಿತ್ತು. ಉಪ ಚುನಾವಣೆಯಲ್ಲಿ ಬಳ್ಳಾರಿ ಬಿಜೆಪಿ ಮಟ್ಟಿಗೆ ಕಾರ್ಯಕರ್ತರು ಕಂಗಾಲಾಗಿದ್ದಂತೂ ಸತ್ಯ. ಮುಂದಿನ ಲೋಕಸಭಾ ಚುನಾವಣೆಗೆ ರೆಡ್ಡಿ ಅನಿವಾರ್ಯ ಎಂದು ತೋರಿಸಲು ಗಾಲಿ ಈ ಮೂಲಕ ಬಿಗ್ ಪ್ಲಾನ್ ಮಾಡಿರಬಹುದೇ ಎಂದು ಅನುಮಾನಿಸಲಾಗುತ್ತಿದೆ. ರೆಡ್ಡಿ ಫ್ರೀ ಬಿಡಿ ಮುಂದಿನ ಚುನಾವಣೆ ನೋಡಿ ಎನ್ನುತ್ತಿದೆ ರೆಡ್ಡಿ ಪಾಳಯ. ಆಪರೇಷನ್ ಕಮಲಕ್ಕೂ ಸೈ ಎನ್ನುತ್ತಿರುವ ರೆಡ್ಡಿಗೆ ಕಮಲ ನಾಯಕರು ಗ್ರೀನ್ ಸಿಗ್ನಲ್ ಕೊಡ್ತಾರಾ? ಬಿಸಿತುಪ್ಪವಾಗಿರುವ ರೆಡ್ಡಿಯನ್ನು ಬಿಜೆಪಿ ಹೈಕಮಾಂಡ್ ಏನು ಮಾಡುತ್ತೆ ಅನ್ನೋದು ಸದ್ಯದ ಕುತೂಹಲದ ಪ್ರಶ್ನೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ