ಚಂದ್ರಶೇಖರ್​ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ರಾಮನಗರ ಉಪಚುನಾವಣೆ ಕಣದಿಂದ ಹಿಂದೆ ಸರಿದಿದ್ದ ಎಲ್​.ಚಂದ್ರಶೇಖರ್​ ವಿರುದ್ಧ ಬಿಜೆಪಿ ರಾತ್ರೋರಾತ್ರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಮೂಲಕ ಅವರ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧವಾಗಿದೆ.
ಚಂದ್ರಶೇಖರ್​ ಅವರ ನಡೆ ನಮಗೆ ಅಚ್ಚರಿ ತಂದಿದೆ ಎಂದಿರುವ ಬಿಜೆಪಿ, ಉಪಚುನಾವಣೆ ಮುಂದೂಡುವಂತೆ ಕೋರಿದೆ. ‘ಎಲೆಕ್ಷನ್​ ನಡೆಯುವುದಕ್ಕೂ ಎರಡು ದಿನ ಮುಂಚಿತವಾಗಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಅವರು ತಿಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಚುನಾವಣೆ ಮುಂದೂಡಬೇಕು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ದೂರನ್ನು ಇ-ಮೇಲ್​ ಮಾಡಿದ್ದಾರೆ. ಇಂದು ಮತ್ತೊಮ್ಮೆ ಬಿಜೆಪಿ ನಾಯಕರಿಂದ ಅಧಿಕೃತವಾಗಿ ಆಯೋಗಕ್ಕೆ ದೂರು ಸಲ್ಲಿಕೆ ಆಗುವ ಸಾಧ್ಯತೆ ಇದೆ.
ಕಾಂಗ್ರೆಸ್​​ನವರಾದ ಚಂದ್ರಶೇಖರ್​​​​ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಅವರಿಗೆ ರಾಮನಗರ ಉಪಚುನವಾಣೆಯಿಂದ ಸ್ಪರ್ಧಿಸಲು ಟಿಕೆಟ್​ ಕೂಡ ಸಿಕ್ಕಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಅವರು ಹೇಳಿಕೊಂಡರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ