ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ
November 2, 2018VDವಾಣಿಜ್ಯComments Off on ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ
Seen By: 63
ನವದೆಹಲಿ: ಬಾದಾಮಿ, ಆಕ್ರೋಟ ಮತ್ತು ಬೇಳೆಕಾಳುಗಳು ಸೇರಿದಂತೆ 29 ಅಮೆರಿಕಾದ ಉತ್ಪನ್ನಗಳ ಮೇಲೆ ಅಧಿಕ ಆಮದು ಸುಂಕ ಹೇರಿಕೆ ಮಾಡುವ ಅಂತಿಮ ಅವಧಿಯನ್ನು ಭಾರತ ಮತ್ತೆ 45 ದಿನಗಳ ಅವಧಿಗೆ ಮುಂದೂಡಿದೆ. ಭಾರತ ಸತತ ಮೂರನೇ ಅವಧಿಗೆ ಸುಂಕ ಹೇರಿಕೆ ಅವಧಿಯನ್ನು ಮುಂದೂಡುತ್ತಿದ್ದು ಡಿಸೆಂಬರ್ 17ರವರೆಗೆ ಮುಂದೂಡಿದೆ ಎಂದು ಸರ್ಕಾರ ತಿಳಿಸಿದೆ.ಹಣಕಾಸು ಸಚಿವಾಲಯ ಈ ಕುರಿತು ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಅದರ ಪ್ರಕಾರ, ಆಮದು ಸುಂಕ ಹೇರಿಕೆಯನ್ನು ಡಿಸೆಂಬರ್ 17ರವರೆಗೆ ಮುಂದೂಡಲಾಗಿದೆ. ಸುಂಕ ಹೇರಿಕೆ ಅವಧಿಯನ್ನು ಮುಂದೂಡುವಂತೆ ವಾಣಿಜ್ಯ ಸಚಿವಾಲಯ ಹಣಕಾಸು ಇಲಾಖೆಯನ್ನು ಕೋರಿತ್ತು.ಕಳೆದ ಜೂನ್ ನಲ್ಲಿ ಭಾರತ ಸರ್ಕಾರ, ಅಮೆರಿಕಾದಿಂದ ಆಮದು ಮಾಡುವ ಕೆಲವು ವಸ್ತುಗಳ ಮೇಲೆ ಆಗಸ್ಟ್ 4ರಿಂದ ಪ್ರತೀಕಾರ ಸುಂಕವನ್ನು ವಿಧಿಸಲು ನಿರ್ಧರಿಸಿತ್ತು. ಆದರೆ ಅದನ್ನು ನಂತರ ಸೆಪ್ಟೆಂಬರ್ 18ರವರೆಗೆ 45 ದಿನಗಳ ಕಾಲ ಮುಂದೂಡಲಾಗಿತ್ತು. ನಂತರ ಮತ್ತೆ ನವೆಂಬರ್ 2ರವರೆಗೆ ಮುಂದೂಡಲಾಗಿತ್ತು.ಅಧಿಕ ಆಮದು ಸೀಮಾ ಶುಂಕ ಹೇರಿಕೆ ಭಾಗವಾಗಿ ಭಾರತ ಸರ್ಕಾರ ಹಲವು ಉತ್ಪನ್ನಗಳ ಮೇಲೆ ಅಧಿಕ ದರ ಬೇರಲು ಅಧಿಸೂಚನೆ ಹೊರಡಿಸಿತ್ತು.ಆಕ್ರೋಟದ ಮೇಲೆ ಆಮದು ಸುಂಕವನ್ನು ಈಗಿರುವ ಶೇಕಡಾ 30ರಿಂದ ಶೇಕಡಾ 120ಕ್ಕೆ ಹೆಚ್ಚಿಸಲಿದ್ದು, ಗಜ್ಜರಿ ಹಿಟ್ಟು, ಕಡಲೆ ಬೇಳೆ, ಮಸೂರ್ ಬೇಳೆಗೆ ಶೇಕಡಾ 30ರಿಂದ ಶೇಕಡಾ 70ಕ್ಕೆ ಹೆಚ್ಚಿಸಲು ಭಾರತ ನಿರ್ಧರಿಸಿದೆ. ಮಸೂರಗಳ ಮೇಲಿನ ತೆರಿಗೆಯನ್ನು ಶೇಕಡಾ 40ರಷ್ಟು ಹೆಚ್ಚು ಮಾಡಲಿದೆ. ಬೋರಿಕ್ ಆಸಿಡ್, ಫಾಸ್ಪರಿಕ್ ಆಮ್ಲ, ಡಯಾಗ್ನೋಸ್ಟಿಕ್ ಕಾರಕ, ಕಬ್ಬಿಣದ ಫ್ಲಾಟ್ ರೋಲ್ಡ್ ಉತ್ಪನ್ನಗಳು, ಸ್ಟೇನ್ ಲೆಸ್ ಸ್ಟೀಲ್ ಗಳು ಹೀಗೆ ಕೆಲವು ಉತ್ಪನ್ನಗಳ ಮೇಲೆ ಅಧಿಕ ತೆರಿಗೆಯನ್ನು ಕೇಂದ್ರ ಸರ್ಕಾರ ಹೇರಲಿದೆ.ಭಾರತದಿಂದ ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸುವುದಾಗಿ ಅಮೆರಿಕಾ ಕಳೆದ ಮಾರ್ಚ್ ತಿಂಗಳಲ್ಲಿ ಘೋಷಿಸಿತ್ತು. ಇದಕ್ಕೆ ಪ್ರತೀಕಾರದ ಕ್ರಮವಾಗಿ ಭಾರತ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.ಈ ಮಧ್ಯೆ ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಕುರಿತು ಸರ್ಕಾರದ ಹಿರಿಯ ಮಟ್ಟದಲ್ಲಿ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.