ಬೆಂಗಳೂರು,ನ.1-ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.
ಸುಮಾರು 10 ಸಾವಿರ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನ ಗೆದ್ದವು.
ಸುಮಾರು 800 ವಿದ್ಯಾರ್ಥಿಗಳು ನಾಡಪ್ರಭು ಕೆಂಪೇಗೌಡರು ಎಂಬ ನೃತ್ಯ ವೈಭವವನ್ನು ಮನಮೋಹಕವಾಗಿ ನಡೆಸಿಕೊಟ್ಟರೆ, ಇನ್ನು ಹಲವು ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಅಭಿಯಾನದ ಮಹತ್ವ ಸಾರುವ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕರುನಾಡು ನಮ್ಮ ಗುಡಿ-ಕರುನಾಡು ನಮ್ಮ ನುಡಿ ಎಂಬ ನೃತ್ಯವನ್ನು 800 ಮಂದಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬೆಂಗಳೂರು ಉತ್ತರ ವಲಯ 1ಮತ್ತು 2ರ ವಿವಿಧ ಶಾಲೆಯ 2360 ವಿದ್ಯಾರ್ಥಿಗಳು ಯೋಗಾಸನವನ್ನು ನಡೆಸಿಕೊಟ್ಟರು.
ಉತ್ತರವಲಯ 2ರ 750 ವಿದ್ಯಾರ್ಥಿಗಳು ಕರುನಾಡಿನ ಕರುಳಿನ ಕರೆ ಎಂಬ ಜಾನಪದ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಉತ್ತರ ವಲಯ 4ರ 800 ವಿದ್ಯಾರ್ಥಿಗಳು ಏರೋಬಿಕ್ಸ್ ವ್ಯಾಯಾಮವನ್ನು ಪ್ರದರ್ಶಿಸಿದರು.
ಉತ್ತರ ವಲಯ 3 ಮತ್ತು 4ರ 2112 ವಿದ್ಯಾರ್ಥಿಗಳು ಸಾಮೂಹಿಕ ಕವಾಯತಿನಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಹಲವು ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆಗೆ ಹೆಜ್ಜೆ ಹಾಕಿದರು.
ರಾಜ್ಯೋತ್ಸವದ ಅಂಗವಾಗಿ ಕೆಂಪು ಮತ್ತು ಹಳದಿ ಬಣ್ಣದ ಬಲೂನ್ಗಳನ್ನು ಹಾರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಸಾಮೂಹಿಕ ಕವಾಯತು ನಡೆಸಿಕೊಟ್ಟರು.