ಕನ್ನಡ ಒಡೆಯುವ ಧ್ವನಿಗಳನ್ನು ಧಿಕ್ಕರಿಸಬೇಕು: ಸಿಎಂ ಎಚ್.ಡಿ.ಕುಮಾರಸ್ವಾಮಿ ಕರೆ

ಬೆಂಗಳೂರು, ನ.1- ಸುಂದರ ಕನ್ನಡ ಒಡೆಯುವ ಧ್ವನಿಗಳನ್ನು ಧಿಕ್ಕರಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 63ನೆ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಮಕ್ಕಳ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನ ಹಲವು ಗಣ್ಯರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ಈ ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದೂ ಕೂಡ ಅಪಚಾರಕ್ಕೆ ಎಡೆ ಮಾಡಿಕೊಡಬಾರದು. ರಾಜ್ಯದ 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಕನ್ನಡವೇ ಪ್ರಾಣ ಪದಕ: ಕನ್ನಡ ಸಾರ್ವಭೌಮತ್ವದ ಮೇಲೆ ಇಂಗ್ಲಿಷ್ ಸವಾರಿ ಮಾಡಲು ನಾವು ಸರ್ವಥಾ ಅವಕಾಶ ನೀಡುವುದಿಲ್ಲ. ಇಂಗ್ಲಿಷ್ ಕಲಿಸುವ ನಮ್ಮ ಉದ್ದೇಶ ಕೇವಲ ವ್ಯವಹಾರಿಕ ದೃಷ್ಟಿಗೆ ಮಾತ್ರ ಸೀಮಿತ ಎಂದು ಹೇಳಿದರು.

ಕನ್ನಡವೇ ಪ್ರಾಣ ಪದಕ ಎಂದು ನಾವು ಭಾವಿಸಿರುವುದು ನಿಜ. ಆದರೆ, ನಮ್ಮ ಮಕ್ಕಳ ಭವಿಷ್ಯ ದೃಷ್ಟಿಯೂ ನಮಗೆ ಮುಖ್ಯ. ನಮ್ಮ ಮಕ್ಕಳು ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕೀಳರಿಮೆಯ ಭಾವದಿಂದ ಹೊರಬಂದು ಎಲ್ಲರಂತೆ ಜೀವನ ಎದುರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುವುದನ್ನು ಗಮನಿಸುತ್ತಿದ್ದೇನೆ. ಕನ್ನಡದ ಸಾರ್ವಭೌಮತ್ವದ ಮೇಲೆ ಇಂಗ್ಲಿಷ್ ಸವಾರಿಗೆ ಅವಕಾಶ ನೀಡುವುದಿಲ್ಲ. ಇದು ವ್ಯವಹಾರಿಕ ದೃಷ್ಟಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಿದರು.

ಜನಪದ ಜಾತ್ರೆಯನ್ನು ಚಿರನೂತನವಾಗಿಸುವ ಕನಸು ಕೂಡ ನನ್ನದು. ಜನಪದ ಜಾತ್ರೆಗಳು ನಗರ ಹಾಗೂ ಗ್ರಾಮೀಣ ಜನರ ಸಂಸ್ಕøತಿ ನಡುವೆ ಸೇತುವೆ ಕಟ್ಟಲಿವೆ. ಜತೆಯಲ್ಲಿಯೇ ನಮ್ಮ ಜನಪದ ಕಲಾವಿದರು ಪ್ರತಿಭೆ ಪ್ರದರ್ಶಿಸಲು ಒಂದು ಅತ್ಯುತ್ತಮ ಅವಕಾಶ ಒದಗಿಸಲಿದೆ.

ಸಮೃದ್ಧ ಕರ್ನಾಟಕ ನಿರ್ಮಾಣದ ಕನಸು: ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ, ಭಾವನಾತ್ಮಕವಾಗಿ ಸಮೃದ್ಧವಾದ ಒಂದು ಸುಂದರ ಕರ್ನಾಟಕ ಕಟ್ಟುವುದು ನನ್ನ ಕನಸು. ಕನಸಿನ ಸಾಕಾರಕ್ಕೆ ದುಡಿಯುವುದು ನನ್ನ ಸಂಕಲ್ಪ. ಹಲವು ವಂಶಗಳು ಕಟ್ಟಿ ಬೆಳೆಸಿದ ಕನ್ನಡ ನಾಡು ತನ್ನದೇ ಆದ ರಾಜಕೀಯ ಅಸ್ಮಿತೆಯನ್ನು ಹೊಂದಿದ ಧನ್ಯಭೂಮಿ. ಈ ನಾಡಿನಲ್ಲಿ ಮೂಡಿಬಂದ ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳೆಲ್ಲ ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿದಂತಹ ಕನ್ನಡ ಆಡಳಿತ ವ್ಯವಸ್ಥೆ ರೂಢಿಸಿದ್ದು ಕರ್ನಾಟಕದ ಹೆಮ್ಮೆ. ಕರ್ನಾಟಕ ಬಹು ಹಿಂದಿನಿಂದಲೂ ಒಂದು ಪ್ರತ್ಯೇಕ ಪ್ರಭಾವಶಾಲಿ ಆಡಳಿತ ಮಂಡಲವಾಗಿ ಉತ್ಕರ್ಷ ಕಂಡಿದೆ ಎಂದರು.

25 ಶತಮಾನಗಳಿಗೂ ಹೆಚ್ಚಿನ ತನ್ನ ಸುದೀರ್ಘ ಚರಿತ್ರೆಯಲ್ಲಿ ಶಕ್ತಿಶಾಲಿಯಾಗಿ ಉಳಿದು ಬಾಳಿ ಬೆಳೆದ ಮನುಕುಲದ ಭರವಸೆಯ ದೀಪ ಎಂಬ ಪ್ರಖ್ಯಾತಿ ಪಡೆದ ಕರ್ನಾಟಕ ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದು ನಮ್ಮ ದೌರ್ಭಾಗ್ಯ. ಛಿದ್ರವಾದ ನಮ್ಮೀ ನಾಡನ್ನು ಮರಳಿ ಒಂದೇ ಛತ್ರದಡಿ ತಂದು ಕರ್ನಾಟಕದ ಗತವೈಭವವನ್ನು ಮರಳಿ ಕಂಡುಕೊಳ್ಳಬೇಕು ಎಂಬ ಆಶಯದ ಮಹಾನ್ ಜನಾಂದೋಲನವೇ ಕರ್ನಾಟಕದ ಏಕೀಕರಣ ಚಳವಳಿ. ಇಂದು ನಮ್ಮ ಕರ್ನಾಟಕ ರೂಪುಗೊಳ್ಳಲು ಈ ಚಳವಳಿಯೇ ಕಾರಣ. ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್‍ನಂತಹ ಮಹಾನ್ ಸಂಘಟನೆಗಳ ಮಾರ್ಗದರ್ಶನದಲ್ಲಿ ಅನೇಕ ಅಪ್ರತಿಮ ಸೇನಾನಿಗಳ ದಿಟ್ಟ ಹೋರಾಟ, ಕೋಟಿ ಕೋಟಿ ಕನ್ನಡಿಗರ ತ್ಯಾಗ-ಬಲಿದಾನಗಳ ಧೀ ಶಕ್ತಿಯ ಫಲವಾಗಿ ರೂಪುಗೊಂಡಿದ್ದು ಅಖಂಡ ಕರ್ನಾಟಕ. ಕನ್ನಡ ಚಳವಳಿಯ ಅಸಂಖ್ಯ ಹೋರಾಟಗಾರರಿಗೆ ನಮನ ಸಲ್ಲಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಕನ್ನಡದ ಗರಿಮೆಯನ್ನು ಎಲ್ಲೆಡೆ ಪಸರಿಸುವುದು ನನ್ನ ಬಹುದೊಡ್ಡ ಕನಸು. 12 ವರ್ಷಗಳ ಹಿಂದೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ದಿನದಂದು ನಾನು ಜನರಿಗೆ ನೀಡಿದ ವಚನ, ಬದ್ಧತೆಗಳು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಉಡಿಯಲ್ಲಿ ತುಂಬಿಕೊಂಡ ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚು ಕಾಲಾವಧಿಯ ಇತಿಹಾಸದ ಹಿನ್ನೆಲೆ ಹೊಂದಿರುವ ಕರ್ನಾಟಕ, ಕನ್ನಡ ಭಾಷೆ ಇನ್ನಷ್ಟು ಪ್ರಜ್ವಲವಾಗಿ ಹೊಳೆಯಬೇಕಾಗಿದೆ ಎಂದು ಹೇಳಿದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸುಧಾರಣೆ: ನಮ್ಮ ಸರ್ಕಾರಿ ಸಂಸ್ಥೆಗಳ ಸುಧಾರಣೆ, ನವೀಕರಣ ಕಾರ್ಯಗಳನ್ನು ಸರ್ಕಾರ ಪ್ರಥಮ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೆÇೀಟಿಯನ್ನು ಹಿಂದಿಕ್ಕಿ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕೆಂಬುದು ನನ್ನ ಮಹದಾಸೆಯಾಗಿದ್ದು, ಇದಕ್ಕೆ ಬೇಕಾದ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಮೂಲಭೂತ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮುಂದುವರಿಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಇಂದಿನಿಂದ ರಾಜ್ಯದಲ್ಲಿ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಒಟ್ಟು 153 ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 10,567 ವಿಶೇಷ ಚೇತನ ಮಕ್ಕಳಿಗೂ ಬಿಸಿ ಹಾಲು ವಿತರಿಸುವ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದೇವೆ. ಒಟ್ಟು 58,30,000ಕ್ಕೂ ಹೆಚ್ಚು ಮಕ್ಕಳು ಬಿಸಿ ಹಾಲು ವ್ಯವಸ್ಥೆಯ ಲಾಭ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯ ಸಮಗ್ರ ಸುಧಾರಣೆಗಾಗಿ ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳ ನವೀಕರಣಕ್ಕಾಗಿ ಈಗಾಗಲೇ 1200 ಕೋಟಿ ರೂ. ಅನುದಾನ ನೀಡಲಾಗಿದೆ. ನಮ್ಮ ಶಿಕ್ಷಕ ವೃಂದ ಕೂಡ ಇನ್ನಷ್ಟು ಶ್ರಮ ಹಾಕಬೇಕಿದೆ ಎಂದು ತಿಳಿಸಿದರು.

ಶಾಲಾ-ಕಾಲೇಜುಗಳು ಶಿಕ್ಷಣ ದೇಗುಲಗಳಾದ ನೊಬೆಲ್ ಸಾಹಿತ್ಯ, ಪುರಸ್ಕಾರ ನಮಗೊಲಿಯುವ ದಿನ ದೂರವಿರಲಾರದು. ಜನತಾ ದರ್ಶನದಲ್ಲಿ ನಾನು ಕಂಡುಕೊಂಡ ಮತ್ತೊಂದು ಸತ್ಯವೆಂದರೆ ನಮ್ಮ ಯುವ ಉದ್ಯೋಗಾಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆ ಮತ್ತು ಸಂವಹನ ಸಮಸ್ಯೆ. ಈ ಯುವಜನರಿಗಾಗಿ ಸರ್ಕಾರದ ವತಿಯಿಂದ 53 ಕಂಪೆನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳ ನಡೆಸಿ ಯುವಜನರ ಪ್ರತಿಭೆಗೆ ಸ್ಫೂರ್ತಿ ನೀಡಲು ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾಲಯ ಸ್ಥಾಪನೆಗೂ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನ ವೀಕ್ಷಿಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಡ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಪೃಥ್ವಿ ಹೆಲ್‍ತಿಕೇರ್ ಫೌಂಡೇಶನ್‍ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ರಾಮಚಂದ್ರ , ಶಾಸಕ ರೋಷನ್ ಬೇಗ್, ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮುನಿರಾಜು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್, ನಗರ ಪೆÇಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ