ಬೆಂಗಳೂರು, ಅ.31- ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚುನಾವಣಾ ನೀತಿ-ಸಂಹಿತೆ ಅಡ್ಡಿಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆಯಾಗಿದೆ.
ಐದು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾಳೆ ನಡೆಯಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯಸರ್ಕಾರ ಮುಂದೂಡಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಕೊನೆ ಕ್ಷಣದಲ್ಲಿ ಸಭೆಯನ್ನು ರದ್ದುಗೊಳಿಸಿದೆ.
ಇಂದು ಬೆಳಗ್ಗೆ 10.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂಬಂಧ ಅಂತಿಮ ಸಭೆ ನಡೆಯಬೇಕಿತ್ತು.ಮಂಡ್ಯ, ರಾಮನಗರ, ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀತಿ-ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಮುಗಿದ ಬಳಿಕ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಸುವುದಾಗಿ ತೀರ್ಮಾನಿಸಿ ಸಭೆಯನ್ನು ಮುಂದೂಡಲಾಗಿದೆ.
62ನೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 62 ಸಾಧಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿತ್ತು.ಒಂದು ಹಂತದಲ್ಲಿ ಎಲ್ಲವೂ ಅಂತಿಮಗೊಂಡಿತ್ತು.ನೀತಿ-ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಮಟ್ಟ ಹಾಕಲು ಪೊಲೀಸರ ಸಹಾಯದೊಂದಿಗೆ ಕ್ರಮ:
ಬೆಂಗಳೂರು, ಅ.31- ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಮಟ್ಟ ಹಾಕಲು ಹಾಗೂ ಅಂತಹವರ ಮೇಲೆ ಹದ್ದಿನ ಕಣ್ಣಿಡಲು ಪೆÇಲೀಸರ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪಾಲಿಕೆ ಸಭೆಯಲ್ಲಿ ತಿಳಿಸಿದರು.
ಮೇಯರ್ ಆದ ನಂತರ ಮೊನ್ನೆ ಮೊದಲ ಸಭೆ ನಡೆಸಿದ ಅವರು, ಉಪಮೇಯರ್ ರಮಿಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ ಸಂತಾಪ ವ್ಯಕ್ತಪಡಿಸಿ ಸಭೆ ಮುಂದೂಡಿದ್ದರು.
ಹಾಗಾಗಿ ಇಂದು ಸಭೆ ಮುಂದುವರಿಸಿದ ಮೇಯರ್, ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಿಮ್ಮೆಲ್ಲರ ಸಹಕಾರ ಬೇಕೆಂದು ಎಲ್ಲ ಸದಸ್ಯರಲ್ಲಿ ಮನವಿ ಮಾಡಿದರು.
ಸಾರ್ವಜನಿಕರಿಗೆ ಸ್ಪಂದಿಸಿ ಎಲ್ಲ ವಾರ್ಡ್ಗಳ ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಒತ್ತು ನೀಡುತ್ತೇವೆ. ಪಾಲಿಕೆಯಲ್ಲಿ ಹೆಚ್ಚು ಮಂದಿ ಮಹಿಳಾ ಸದಸ್ಯೆಯರೇ ಇದ್ದಾರೆ.ನಾನು ಕೂಡ ಮಹಿಳೆ ಆಗಿರುವುದರಿಂದ ನಗರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅವರೆಲ್ಲ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ.ಅವರುಗಳ ವಾರ್ಡ್ಗಳ ಅಭಿವೃದ್ಧಿಗೂ ಹೆಚ್ಚಿನ ರೀತಿಯಲ್ಲಿ ಒತ್ತು ನೀಡುತ್ತೇವೆ ಎಂದು ಹೇಳಿದರು.
ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸುರಿಯುತ್ತಿರುವ ಅನುಪಯುಕ್ತ ವಸ್ತುಗಳು ಹಾಗೂ ತ್ಯಾಜ್ಯ ಸುರಿಯುವವರ ವಿರುದ್ಧ ನಿಗಾ ವಹಿಸಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೆÇಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು.
ನಗರದ ನಾಗರಿಕರು ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ಬಿಬಿಎಂಪಿಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು, ನಗರವನ್ನು ತಮ್ಮ ಮನೆ ಎಂದು ಭಾವಿಸಿ ಶುಚಿತ್ವ ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮೇಯರ್ ಮನವಿ ಮಾಡಿದರು.
ಪಾಲಿಕೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕೊರತೆ ಇದ್ದು, ಈಗ ಕಾರ್ಯನಿರ್ವಹಿಸುತ್ತಿರುವವರ ಮೇಲೆ ಒತ್ತಡವಿರುವುದರಿಂದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಂಡು ಆಡಳಿತದಲ್ಲಿ ದಕ್ಷತೆ ತರಲಾಗುವುದು ಎಂದರು.
ರಸ್ತೆಗುಂಡಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ಇತರೆ ಕುಂದುಕೊರತೆಗಳ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು, ಸದಸ್ಯರು ಸಹಕರಿಸಬೇಕೆಂದು ಗಂಗಾಂಬಿಕೆ ಮನವಿ ಮಾಡಿದರು.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ನ ನೇತ್ರಾ ನಾರಾಯಣ್ ಮತ್ತಿತರ ಹಿರಿಯ ಸದಸ್ಯರು ಮಾತನಾಡಿ, ಒಂದು ವರ್ಷದ ಅವಧಿಯನ್ನು ಪೂರೈಸಲು ಎಲ್ಲ ಸಹಕಾರ ನೀಡುವುದಾಗಿ ಮೇಯರ್ ಗಂಗಾಂಬಿಕೆ ಅವರಿಗೆ ಭರವಸೆ ನೀಡಿದರು.