ನ. 3ರಂದು ನಡೆಯುವ ಚುನಾವಣೆಗೆ ಸಕಲ ಸಿದ್ಧತೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು, ಅ.31- ರಾಜ್ಯದ ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆಗಳಿಗೆ ನವೆಂಬರ್ 3ರಂದು ನಡೆಯುವ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮತದಾನ ಪ್ರಾರಂಭವಾಗುವ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.ಅಂದರೆ ಬಹಿರಂಗ ಪ್ರಚಾರ ಇಂದೇ ಕೊನೆಗೊಳ್ಳಲಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.ಮತದಾನಕ್ಕೆ ಸೂಕ್ತ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಅವರು ಹೇಳಿದರು.

ಆಯಾ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತದಾನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ವಿಕಲಚೇತನರಿಗೆ ವ್ಹೀಲ್‍ಚೇರ್ ಹಾಗೂ ಮತಗಟ್ಟೆಗಳಿಗೆ ಮನೆಯಿಂದ ಕರೆದೊಯ್ಯುವ ಹಾಗೂ ಮತಗಟ್ಟೆಯಿಂದ ಕರೆದುಕೊಂಡು ಬರುವ ವ್ಯವಸ್ಥೆ ಕೂಡ ಮಾಡಲಾಗಿದ್ದು, ನಾಳೆಯೊಳಗೆ ಆಯಾ ಕ್ಷೇತ್ರಗಳಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 16,96,978 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 2002 ಮತಗಟ್ಟೆಗಳಿದ್ದು, ಒಟ್ಟು 2603 ವಿವಿ ಪ್ಯಾಟ್ ಯಂತ್ರಗಳನ್ನು ಒದಗಿಸಲಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 17,01050 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದು, 1901 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಟ್ಟು 2472 ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲು ಸಜ್ಜುಗೊಳಿಸಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 17,22,476 ಮತದಾರರಿದ್ದು, 2047 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 2662 ವಿವಿ ಪ್ಯಾಟ್ ಯಂತ್ರಗಳನ್ನು ಒದಗಿಸಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 2,02,599 ಮತದಾರರಿದ್ದು, 360 ವಿವಿ ಪ್ಯಾಟ್ ಮತಯಂತ್ರಗಳನ್ನು ಒದಗಿಸಲಾಗಿದೆ.
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 1,99,339 ಮತದಾರರಿದ್ದು, 294 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತದೆ. ಒಟ್ಟಾರೆ ಐದು ಕ್ಷೇತ್ರಗಳಲ್ಲಿ 6453 ಮತಗಟ್ಟೆಗಳಿದ್ದು, ಒಟ್ಟು 8391 ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತದೆ.34,493ಚುನಾವಣಾ ಸಿಬ್ಬಂದಿಯನ್ನು ಬಳಸಲಾಗುತ್ತದೆ.ಇದರಲ್ಲಿ ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ