ಬೆಂಗಳೂರು, ಅ.29- ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು ಬಳಸಿಕೊಂಡು, ಕನ್ನಡಿಗರ ಹೊಣೆಗಾರಿಕೆಯನ್ನು ತಿಳಿಸುವ ಸದಾಶಯದಿಂದ ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘವು ಇದೇ 31ರಂದು ಹೊತ್ತಿತ್ತೋ ಹೊತ್ತಿತು ಕನ್ನಡದ ಪಂಜು ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸಂಘದ ಸದಸ್ಯರು ಮತ್ತು ಯುವಕರು ಕನ್ನಡ ಬಾವುಟದೊಡನೆ ಪಂಜಿನ ಮೆರವಣಿಗೆಯನ್ನು ಎಚ್ಎಎಲ್ನ ಮಧ್ಯ ಬಡಾವಣೆಯ ಪ್ರತಿ ರಸ್ತೆಯಲ್ಲೂ ನಡೆಸುವರು. ಪ್ರತಿ ಮನೆಗೂ ಹೋಗಿ ಕನ್ನಡವನ್ನು ಬೆಳೆಸಲು, ಉಳಿಸಲು ಶ್ರೀಸಾಮಾನ್ಯರು ಏನು ಮಾಡಬಹುದು ಮತ್ತು ಕರ್ನಾಟಕದ ರಕ್ಷಣೆ ಹೇಗೆ ಎಂಬುದನ್ನು ತಿಳಿಸುವ ಕನ್ನಡಕ್ಕೆ ಶ್ರೀಸಾಮಾನ್ಯ ಏನು ಮಾಡಬೇಕು ಎಂಬ ಕಿರು ಹೊತ್ತಿಗೆಯನ್ನು ಮತ್ತು ನಾಡೋಜ ಡಾ.ಎಂ.ಚಿದಾನಂದಮೂರ್ತಿ ಅವರ ಕನ್ನಡ ಸಂಸ್ಕøತಿಯ ಹಿರಿಮೆ ಗರಿಮೆ ಕೃತಿಯನ್ನು ಉಚಿತವಾಗಿ ಕೊಡಲಾಗುತ್ತದೆ.
ಮನೆಯಲ್ಲಿರುವ ಮಕ್ಕಳ ಕೈಗೆ ಮಣ್ಣಿನ ಹಣತೆ (ಕನ್ನಡ ಹಣತೆ) ನೀಡಿ ಕನ್ನಡದ ಪಂಜಿನಿಂದ ದೀಪ ಹಚ್ಚಿ ಮೆರವಣಿಗೆ ಮುಂದೆ ಸಾಗುತ್ತದೆ. ಈಗಾಗಲೇ 1000ಕ್ಕೂ ಹೆಚ್ಚು ಮನೆಯವರು ಮನೆಯ ಮುಂದೆ ಹಣತೆ ತರುವಂತೆ ಕೋರಿದ್ದು, ಮೆರವಣಿಗೆಯಲ್ಲಿ ಎಚ್ಎಎಲ್ ಕಾರ್ಮಿಕ ಸಂಘ ಹಾಗೂ ವಿವಿಧ ಸಂಘಗಳು ಪಾಲ್ಗೊಳ್ಳುತ್ತಿವೆ.
ಅಂದು ಸಂಜೆ 4.3ಕ್ಕೆ ಮಾರತಹಳ್ಳಿ ಸಮೀಪದ ಎಚ್ಎಎಲ್ನ ಮಧ್ಯ ಬಡಾವಣೆಯ ಕಾಳಿದಾಸ ರಂಗಮಂಟಪದಲ್ಲಿ ಪಂಜಿನ ಮೆರವಣಿಗೆಯ ಉದ್ಘಾಟನೆಯನ್ನು ನಾಡೋಜ ಡಾ.ಎಂ.ಚಿದಾನಂದಮೂರ್ತಿ ಮನೆ-ಮನೆಗೆ ಕನ್ನಡ ಜ್ಯೋತಿ ಪಂಜಿನಿಂದ ಜ್ಯೋತಿ ಹೊತ್ತಿಸುವುದರ ಮೂಲಕ ಚಾಲನೆ ನೀಡುವರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ ಹಾಗೂ ಅಧ್ಯಕ್ಷತೆಯನ್ನು ಎಚ್ಎಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸನ್ ವಹಿಸುವರು.
ಹಲವು ಗಣ್ಯರು, ಕನ್ನಡ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಆರಂಭಕ್ಕೆ ಮುನ್ನ ಕನ್ನಡ ಜಾಗೃತಿಯ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.