ಸಾಗುವಳಿ ಮಾಡುತ್ತಿರುವ ರೈತರ ಭೂಮಿಗಳಿಗೆ ಕಾನೂನುಬದ್ಧ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

ಬೆಂಗಳೂರು, ಅ.29-ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಭೂಮಿಗಳಿಗೆ ಕಾನೂನುಬದ್ಧವಾದ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.
ಉತ್ತರ ಕನ್ನಡ ಜಿಲ್ಲೆಯಿಂದ ಆಗಮಿಸಿದ ನೂರಾರು ರೈತರು ರೈಲ್ವೆ ನಿಲ್ದಾಣದಿಂದ ಆನಂದ್‍ರಾವ್ ವೃತ್ತದ ಬಳಿ ಇರುವ ಮಹಾತ್ಮಾಗಾಂಧೀಜಿ ಪ್ರತಿಮೆವರೆಗೂ ಕಾಲ್ನಡಿಗೆ ಜಾಥಾ ಮೂಲಕ ಮೆರವಣಿಗೆ ನಡೆಸಿದರು.

ಪ್ರತಿಮೆ ಎದುರು ಧರಣಿ ಆರಂಭಿಸಿದ ರೈತರು ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರಾವರ ಜಿಲ್ಲೆಯಲ್ಲಿ ಸುಮಾರು 50ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿಯನ್ನು ಮೂರ್ನಾಲ್ಕು ತಲೆಮಾರುಗಳಿಂದಲೂ ರೈತರು ಸಾಗುವಳಿ ಮಾಡುತ್ತಿದ್ದಾರೆ ಮತ್ತು ಸಣ್ಣಪುಟ್ಟ ಗುಡಿಸಲು ಹಾಗೂ ಮನೆಗಳನ್ನು ಕಟ್ಟಿಕೊಂಡಿದ್ದಾರೆ.

ಆದರೆ, ಸರ್ಕಾರ ಈ ಭೂಮಿಗೆ ಯಾವುದೇ ಅಧಿಕೃತ ದಾಖಲಾತಿಗಳನ್ನು ಮಾಡಿಕೊಟ್ಟಿಲ್ಲ. ಕೆಲವರಿಗೆ ನೆಪಮಾತ್ರಕ್ಕೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಅದರಲ್ಲೂ ಸರ್ಕಾರದ ಭೂಮಿ ಎಂದು ಉಲ್ಲೇಖಿಸಲಾಗಿದೆ. ಇದರಿಂದ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಸ್ವಂತಕ್ಕೆ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬರುವ ಮೊದಲೇ ರೈತರು ಸಾಗುವಳಿ ಮಾಡುತ್ತಿದುದ್ದರಿಂದ ಈ ಜಮೀನುಗಳಿಗೆ ಕಾಯ್ದೆ ಅನ್ವಯವಾಗುವುದಿಲ್ಲ. ಆದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ರೈತರಿಗೆ ಅನುಕೂಲ ಮಾಡಿಕೊಡುವ ಬದಲು ತೊಂದರೆ ಕೊಡುತ್ತಿದ್ದಾರೆ ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ವಿ.ದೇಶಪಾಂಡೆ ಅವರು ಈ ಅವಧಿಯೂ ಸೇರಿ ಆರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಬಾರಿ ಕಂದಾಯ ಸಚಿವರೂ ಆಗಿದ್ದಾರೆ. ಪ್ರತಿ ಬಾರಿಯೂ ಚುನಾವಣೆ ಬಂದಾಗಲೂ ಜಿಲ್ಲೆಯ ರಾಜಕಾರಣಿಗಳು ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆದು ಗೆಲ್ಲುತ್ತಾರೆ. ನಂತರ ರೈತರ ಸಮಸ್ಯೆ ಬಗೆಹರಿಸುವಲ್ಲಿ ವಂಚಿಸುತ್ತಿದ್ದಾರೆ. ರೈತಪರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾಲದಲ್ಲಾದರೂ ನಮ್ಮ ಸಮಸ್ಯೆ ಬಗೆಹರಿಯಲಿ ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಚಿದಾನಂದ ಹರಿಜನ, ಗೀತಾ ಎಂ.ಚೌವ್ಹಾಣ್, ರವಿ ಜಿ.ಟಿ., ಭೀಮಸಿ ವಾಲ್ಮೀಕಿ, ಹನುಮಂತಪ್ಪ ಹರೆಗೊಪ್ಪ, ಶರೀಫ್‍ಸಾಬ, ಮಂಜುನಾಥಭಟ್ಟ, ದತ್ತಾತ್ರೇಯ ಆನಂತಭಟ್ಟ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ