ನವದೆಹಲಿ: ಪ್ರತಿವರ್ಷ ನಡೆಯುವ ಗಣರಾಜ್ಯೋತ್ಸವಕ್ಕೆ ವಿದೇಶದ ಗಣ್ಯರು ಅತಿಥಿಯಾಗಿ ಆಗಮಿಸುವುದು ವಾಡಿಕೆ. ಈ ಮೊದಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸೇರಿ ಅನೇಕರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂತೆಯೇ ಮುಂಬರುವ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಆಮಂತ್ರಣ ನೀಡಲಾಗಿತ್ತು. ಆದರೆ ಅಮೆರಿಕದ ವೈಟ್ಹೌಸ್ ಇದನ್ನು ತಿರಸ್ಕರಿಸಿದೆಯಂತೆ.!
ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕಕ್ಕೆ ಭಾರತ ಈ ಆಮಂತ್ರಣ ನೀಡಿತ್ತು. ಈ ಪತ್ರಕ್ಕೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ‘ಟ್ರಂಪ್ ಜನವರಿ ತಿಂಗಳಲ್ಲಿ ಕೆಲ ಕಮಿಟ್ಮೆಂಟ್ಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ಭಾರತಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ’ ಎಂದಿದ್ದಾರೆ.
ಆದರೆ ಟ್ರಂಪ್ ಭಾರತಕ್ಕೆ ಆಗಮಿಸದೇ ಇರಲು ನಿರ್ಧರಿಸಿರುವುದಕ್ಕೆ ಬೇರೆಯದೇ ಕಾರಣಗಳಿವೆ ಎಂಬುದು ತಜ್ಞರ ಅಭಿಪ್ರಾಯ. ರಕ್ಷಣಾ ವ್ಯವಸ್ಥೆಯ ವಿಚಾರದಲ್ಲಿ ರಷ್ಯಾ ಜತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಅಮೇರಿಕ ಎಚ್ಚರಿಕೆ ನೀಡಿತ್ತು. ಈ ನಡುವೆಯೂ ಭಾರತ ಎಸ್-400 ಮಿಸೈಲ್ ಖರೀದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ, ಇರಾನ್ನಿಂದ ಭಾರತ ಕಚ್ಚಾತೈಲ ಆಮದು ಮಾಡಿಕೊಳ್ಳುವುದು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಅಮೆರಿಕದ ನಿರ್ದೇಶನವಾಗಿತ್ತು. ಆದರೆ ಈ ನಿರ್ದೇಶನವನ್ನು ಭಾರತ ನಿರ್ಲಕ್ಷ್ಯ ಮಾಡಿತ್ತು. ಹಾಗಾಗಿ ಟ್ರಂಪ್ ಭಾರತಕ್ಕೆ ಆಗಮಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.