ಪಿಟ್ಸ್​ಬರ್ಗ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ

ಪಿಟ್ಸ್ಬರ್ಗ್​: ಅಮೆರಿಕದ ಪಿಟ್ಸ್​ಬರ್ಗ್​ನಲ್ಲಿರುವ ಯಹೂದಿಗಳ ಧಾರ್ಮಿಕ ಸ್ಥಳ ‘ಟ್ರೀ ಆಫ್​ ಲೈಫ್​’ ಮೇಲೆ ನಡೆದ ಶೂಟ್​ಔಟ್​ನಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಗುಂಡಿನ ದಾಳಿ ನಡೆಸುವುದಕ್ಕೂ ಮೊದಲು ಬಂದೂಕುಧಾರಿ ‘ಎಲ್ಲ ಯಹೂದಿಗಳು ಸಾಯಲೇಬೇಕು’ ಎಂಬ ಘೋಷಣೆ ಕೂಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದು ಯಹೂದಿಗಳನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿ ಎಂಬುದು ಈ ಮೂಲಕ ಸಾಬೀತಾಗಿದೆ.
11 ಜನರನ್ನು ಬಲಿ ತೆಗೆದುಕೊಂಡ ವ್ಯಕ್ತಿ ರಾಬರ್ಟ್​​ ಬೋವರ್ಸ್​ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಜನಾಂಗೀಯ ನಿಂದನೆ ಹಾಗೂ ಕೊಲೆ ಆರೋಪವನ್ನು ಈತನ ಮೇಲೆ ಹೊರಿಸಲಾಗಿದ್ದು, ಸ್ಥಳೀಯ ನ್ಯಾಯಾಲಯ ರಾಬರ್ಟ್​​ಗೆ ಮರಣದಂಡನೆ ನೀಡುವ ಸಾಧ್ಯತೆ ಇದೆ.‘
ಯಹೂದಿಗಳ ಧಾರ್ಮಿಕ ಸ್ಥಳವಾದ “ಟ್ರೀ ಆಫ್ ಲೈಫ್” ಮೇಲೆ ಅಮೆರಿಕದ ಕಾಲಮಾನದಂತೆ ಬೆಳಗ್ಗೆ 9:45ರ ಸುಮಾರಿಗೆ ದಾಳಿಯಾಗಿದೆ. ಆ ಸಂದರ್ಭದಲ್ಲಿ ಯಹೂದಿಗಳ ಧಾರ್ಮಿಕ ಶಬ್ಬತ್ ಆಚರಣೆ ಶುರುವಾಗಿತ್ತು. ರಜೆಯ ದಿನವಾದ್ದರಿಂದ ಈ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಇರಲಿಲ್ಲ. ಧಾರ್ಮಿಕ ಕಾರ್ಯಕ್ರಮವಾದ್ದರಿಂದ ಯಾರು ಬೇಕಾದರೂ ಬಂದು ಹೋಗಬಹುದಾಗಿತ್ತು. ದುಷ್ಕರ್ಮಿ ದಾಳಿಯಾದಾಗ 50-60 ಜನರು ಪೂಜೆಗೆ ಸೇರಿದ್ದರೆನ್ನಲಾಗಿದೆ.
ಈ ದಾಳಿಗೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದೆ. ‘ಯಹೂದಿಗಳ ವಿರುದ್ಧ ನಡೆದ ಈ ದಾಳಿಯನ್ನು ಸಹಿಸುವುದಿಲ್ಲ. ಈ ರೀತಿ ಅಪರಾಧ ತಡೆಯಲು ನಾವು ಒಂದಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೆ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ