ಬೆಂಗಳೂರು, ಅ.26-ರಾಜ್ಯದ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಪ್ರಚಾರದಲ್ಲಿ ಬಹುತೇಕ ಸಚಿವರು ಪಾಲ್ಗೊಂಡಿರುವುದರಿಂದ ಆಡಳಿತ ಕೇಂದ್ರ ಸ್ಥಾನವಾದ ವಿಧಾನಸೌಧ ಮತ್ತು ವಿಕಾಸಸೌಧ ಬಣಗುಡುತ್ತಿವೆ.
ಚುನಾವಣಾ ಪ್ರಚಾರ ಕಾರ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಸಚಿವರು ಭಾಗವಹಿಸಿರುವುದರಿಂದ ಈ ಆಡಳಿತದ ಶಕ್ತಿಕೇಂದ್ರಗಳು ಬಿಕೋ ಎನ್ನತೊಡಗಿವೆ.
ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರು ಇಲ್ಲದಿರುವುದರಿಂದ ಸಾರ್ವಜನಿಕರ ಭೇಟಿಯೂ ಕೂಡ ಗಣನೀಯವಾಗಿ ಇಳಿಕೆಯಾಗಿದೆ.
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ನಿನ್ನೆ ತುಂಬಿ ತುಳುಕುತ್ತಿದ್ದ ಈ ಶಕ್ತಿ ಕೇಂದ್ರಗಳು ಇಂದು ಖಾಲಿ ಖಾಲಿಯಾಗಿದ್ದವು. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬಂದಂತಹ ಜನರು ಸಚಿವರನ್ನು ಭೇಟಿಯಾಗಲಾಗದೆ ವಾಪಸ್ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಾಜ್ಯದ ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆ ಉಪಚುನಾವಣೆಗಳ ಪ್ರಚಾರ ಕಾರ್ಯರದಲ್ಲಿ ಸಚಿವರು, ಶಾಸಕರು ಹಾಗೂ ರಾಜಕೀಯ ಮುಖಂಡರು ತೊಡಗಿಕೊಂಡಿರುವುದರಿಂದ ವಿಧಾನಸೌಧದ ಕಚೇರಿಗಳಿಗೆ ಸಚಿವರ ಹಾಜರಾತಿ ತೀರಾ ಕಡಿಮೆ.