ಆಚಾರ್ಯ ಕಾಲೇಜಿನ ವಿದ್ಯಾರ್ಥಿಗಳಿಂದ ವ್ಯವಸಾಯಕ್ಕೆ ಪೂರಕವಾಗುವ ಯಂತ್ರ ಸಿದ್ಧ

ಬೆಂಗಳೂರು, ಅ.26-ರೈತರ ವ್ಯವಸಾಯಕ್ಕೆ ಪೂರಕವಾಗುವ ಯಂತ್ರವನ್ನು ಆಚಾರ್ಯ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಸತೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಬಹುಪಯೋಗಿ, ವ್ಯವಸಾಯಿಕ ಯಂತ್ರವಾಗಿದೆ ಎಂದರು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಈ ಒಂದೇ ಯಂತ್ರವು ಪ್ರಸ್ತುತ ಲಭ್ಯವಿರುವ ಏಕ ಕಾರ್ಯ ಯಂತ್ರಗಳ ಬದಲಿಗೆ ಬಹುಪಯೋಗಿಯಾಗಿ ಬಳಸಬಹುದಾಗಿದೆ. ಇದು ಉಳುಮೆ, ಬಿತ್ತನೆ, ಕ್ರಿಮಿನಾಶಕ ಸಿಂಪಡಣೆ, ಬೆಳೆ ಕೊಯ್ಲು ಮುಂತಾದವುಗಳನ್ನು ಈ ಒಂದೇ ಯಂತ್ರದಿಂದ ಮಾಡಬಹುದಾಗಿದೆ ಎಂದು ವಿವರಿಸಿದರು.

ಈ ಯಂತ್ರದಿಂದ ರೈತರಿಗೆ ಬಹಳಷ್ಟು ಉಪಯೋಗವಾಗಲಿದ್ದು, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ತರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಂತಸ ತರಲಿದೆ ಎಂದು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಆರ್.ಪ್ರತಾಪ್, ಎಂ.ನಿರ್ಮಲಾ, ಯೋಗೇಶ್, ಎ.ಚಂದ್ರಶೇಖರ್, ವಿ.ಮೋಹನ್, ವೈ.ಎನ್.ಬಸವರಾಜ್, ಎಸ್.ಕಾರ್ತಿಕ್, ಜಿ.ಎಸ್.ವೇದಾವತಿಗಳು ಸೇರಿ ಈ ನೂತನ ಯಂತ್ರವನ್ನು ಆವಿಷ್ಕರಿಸಿರುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ