ವಿದ್ಯುತ್ ಮಾಪನ ಕೇಂದ್ರಗಳಲ್ಲಿ ತರಬೇತಿ ಪಡೆದ ನೌಕರರನ್ನು ಬಳಸಿಕೊಳ್ಳಲು ಒತ್ತಾಯ

ಬೆಂಗಳೂರು, ಅ.26-ವಿದ್ಯುತ್ ಮಾಪನ ಕೇಂದ್ರಗಳಲ್ಲಿ ಕೌಶಲ್ಯ ರಹಿತ ನೌಕರರಿಂದಾಗಿ ಹಾಗೂ ಸ್ಥೂಲ ಪರಿಚಯವಿಲ್ಲದಿರುವರಿಂದ ಕೆಲವು ಕಡೆ ಅನಿರೀಕ್ಷಿತ ಅವಘಡಗಳು ಸಂಭವಿಸುತ್ತಿದ್ದು, ತರಬೇತಿ ಪಡೆದ ನೌಕರರನ್ನು ಬಳಸಿಕೊಳ್ಳಬೇಕೆಂದು ಉಪಮುಖ್ಯ ವಿದ್ಯುತ್ ನಿರೀಕ್ಷಕ ಎಚ್.ಎಸ್.ವೆಂಕಟೇಶ್ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ವಿದ್ಯುತ್ ಮಾಪನ ಮತ್ತು ಸುರಕ್ಷತೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಸರಬರಾಜು ಕುರಿತಂತೆ ಕಾನೂನು ಚೌಕಟ್ಟಿನ ಅರವಿರಬೇಕು, ವಿವಿಧ ವಲಯಗಳ ವಿತರಣಾ ಕೇಂದ್ರಗಳ ಸ್ಥೂಲ ಪರಿಚಯವಿರಬೇಕು ಎಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅವುಗಳನ್ನು ಆಗಿಂದಾಗ್ಗೆ ಪರಿಚಯಿಸುವುದರಿಂದ ಸೂಕ್ಷ್ಮ, ಸಣ್ಣ, ಉದ್ದಿಮೆದಾರರಿಗೆ ಹಾಗೂ ಗ್ರಾಹಕ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ಪ್ಲಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಜೈಸನ್ ಐಸಾಕ್ ಹಾಗೂ ಮುಖ್ಯಸ್ಥ ಪಿ.ಶ್ರೀಧರನ್ ವಿದ್ಯುತ್ ಮಾಪನ ಸುರಕ್ಷತೆ ಬಗ್ಗೆ ವಿವರಿಸಿದರು.
ಕಾಸಿಯಾದ ಎಸ್.ಎಂ.ಹುಸೇನ್ ಮಾತನಾಡಿ, ರಾಜ್ಯದಲ್ಲಿ ಎಂಎಸ್‍ಎಂಇಗಳು ಅದರಲ್ಲೂ ವಿಶೇಷವಾಗಿ ಎಂಎಸ್‍ಎಂಇಗಳ ಕಾರ್ಯ ನಿರ್ವಹಣೆ, ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಉಂಟಾಗುತ್ತಿರುವ ವಿದ್ಯುತ್ ಮಾಪನ ಮತ್ತು ಸುರಕ್ಷತೆ ಕುರಿತು ವಿವರಿಸಿದರು.

ಪೀಣ್ಯ ಕೈಗಾರಿಕಾ ವಲಯದಲ್ಲಿ ಸರ್ವೀಸ್ ಔಟ್‍ಲೆಟ್ ಸ್ಥಾಪಿಸಿ ಆ ಮೂಲಕ ಪ್ಲಕ್ ಇಂಡಿಯಾದ ಸಾಧಕ -ಬಾಧಕಗಳನ್ನು ಪರಿಚಯಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಕಾಸಿಯಾ ಗೌರವ ಅಧ್ಯಕ್ಷ ಬಸವರಾಜ್ ಎಸ್.ಜವಳಿ, ಎನರ್ಜಿ ಪ್ಯಾನಲ್ ಛೇರ್‍ಮನ್ ಎಸ್.ಎಂ.ಹುಸೇನ್, ಪ್ಲಕ್ ಇಂಡಿಯಾದ ಬೆನ್‍ರಜ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ