ರೈತರ ಕೃಷಿ ಸಾಲ ಮನ್ನಾ: ನ.1ರಿಂದ 44 ಲಕ್ಷ ರೈತ ಕುಟುಂಬಗಳಿಗೆ ಋಣಮುಕ್ತ ಪತ್ರ

ಬೆಂಗಳೂರು, ಅ.23- ರೈತರ ಕೃಷಿ ಸಾಲ ಮನ್ನಾ ಮಾಡಲಾಗಿದ್ದು, ನವೆಂಬರ್ ಒಂದರಿಂದ ರಾಜ್ಯದ 44 ಲಕ್ಷ ರೈತ ಕುಟುಂಬಗಳಿಗೆ ಋಣಮುಕ್ತ ಪತ್ರ ರವಾನೆ ಮಾಡಲಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಪ್ರೆಸ್‍ಕ್ಲಬ್‍ನಲ್ಲಿಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರ 50 ಸಾವಿರ ವರೆಗೂ ಸಾಲ ಮನ್ನಾ ಮಾಡಿದ ಪೈಕಿ ಬಾಕಿ ಇದ್ದ 3300 ಕೋಟಿ ರೂ.ವನ್ನು ಮೈತ್ರಿ ಸರ್ಕಾರ ತೀರಿಸಿದೆ. 2018-19ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳು ಪಡೆದಿದ್ದ ಸಾಲದ ಪೈಕಿ 10,300 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿದೆ. ಅದರಲ್ಲಿ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಮುಂದಾದಾಗ ಆರಂಭದಲ್ಲಿ ಬ್ಯಾಂಕುಗಳು ಸಹಕಾರ ನೀಡಲಿಲ್ಲ. ಅದರ ಹಿಂದಿನ ರಾಜಕಾರಣವನ್ನು ಚರ್ಚಿಸಲು ಹೋಗುವುದಿಲ್ಲ.

ಹಲವು ಸುತ್ತಿನ ಸಭೆಗಳ ನಂತರ ಬ್ಯಾಂಕುಗಳು ಒಪ್ಪಿಕೊಂಡಿವೆ. ಇಂದು ಸಿಂಡಿಕೇಟ್ ಬ್ಯಾಂಕ್‍ನ ಅಧ್ಯಕ್ಷರು ನನ್ನನ್ನು ಭೇಟಿ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಎರಡು ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗಿದೆ. ಈಗಾಗಲೇ ಸಾಲ ರೈತರು ಸಾಲ ತೀರಿಸಿದ್ದರೆ ಅವರಿಗೆ 25 ಸಾವಿರ ರೂ. ಇನ್‍ಸೆಂಟೀವ್ ಸೇರಿ 2.25 ಲಕ್ಷ ಲಾಭವಾಗುತ್ತದೆ. ಸಾಲ ಮನ್ನಾದಿಂದ ರಾಜ್ಯ ಸರ್ಕಾರಕ್ಕೆ 43ಸಾವಿರ ಕೋಟಿ ರೂ. ಹೊರೆಯಾದರೆ, ರಾಜ್ಯದ 44 ಲಕ್ಷ ರೈತರಿಗೆ ಲಾಭವಾಗುತ್ತಿದೆ. ಈ ಸಾಲದ ಬಾಬ್ತು 6500 ಕೋಟಿ ರೂ. ಹಣ ಬಿಡುಗಡೆ ಮಾಡಲು ನಾನು ಮಂಡಿಸಿದ ಬಜೆಟ್‍ನಲ್ಲಿ ಹಣ ನಿಗದಿ ಮಾಡಿದ್ದೇನೆ. ಇದಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಜತೆಗೆ ಸಾಲ ಮನ್ನಾದಿಂದ ಇತರೆ ಯೋಜನೆಗಳಿಗೂ ಬಾಧಕವಾಗದಂತೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿಯವರ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಐದು ಕ್ಷೇತ್ರಗಳ ಉಪ ಚುನಾವಣೆ ನಂತರ ಸಾಲ ಮನ್ನಾದ ಸಮಗ್ರ ಮಾಹಿತಿ ಸುಲಭವಾಗಿ ಅರ್ಥವಾಗುವಂತೆ ವಿವರವಾಗಿ ಜಾಹೀರಾತು ನೀಡಲಾಗುವುದು. ನವೆಂಬರ್ ಒಂದರಿಂದ ರೈತ ಕುಟುಂಬಗಳಿಗೆ ಋಣಮುಕ್ತ ಪತ್ರಗಳನ್ನು ನನ್ನ ಹೆಸರಿನಲ್ಲೇ ಕಳುಹಿಸಲಾಗುವುದು ಎಂದು ಹೇಳಿದರು.

ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ನೋವು ಅನುಭವಿಸುತ್ತಿರುವ ಹಿರಿಯರಿರುವ ಕುಟುಂಬಗಳ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ . ಮಾಹಿತಿ ಪಡೆದ ನಂತರ ಶೈಕ್ಷಣಿಕ ಸಾಲ ಮನ್ನಾದ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು.
ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ. ಕೆಲಸ ಮಾಡುತ್ತಿಲ್ಲ ಎಂಬ ಅಪಪ್ರಚಾರ ಪದೇ ಪದೇ ನಡೆಯುತ್ತಿದೆ. ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಕಟ್ಟಡ ದುರಸ್ತಿಗೆ 1200ಕೋಟಿ ಒದಗಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ 29 ಸಾವಿರ ಕೋಟಿ ಹಂಚಿಕೆ ಮಾಡಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ 56 ಸಾವಿರ ಕುಟುಂಬಗಳಿಗೆ ಸೌಲಭ್ಯ ದೊರಕುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪ ಯೋಜನೆಯ ಹಣ ಖರ್ಚು ಮಾಡದ ಅಧಿಕಾರಿಗಳನ್ನು ಶಿಕ್ಷಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಪಿಡಬ್ಲ್ಯೂಡಿ ಇಲಾಖೆಯಲ್ಲಿ 12ಸಾವಿರ ಕೋಟಿರೂ.ನಷ್ಟು ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ 500 ಕೋಟಿ ರೂ.ಗಳ ಬೇಡಿಕೆ ಬಂದಿದೆ. ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಅವರ ಸರ್ಕಾರ 3600 ಕೋಟಿ ಇಟ್ಟಿತ್ತು. ಅದನ್ನು ಪ್ರತಿ ಕುಟುಂಬಕ್ಕೆ 7 ಕೆಜಿ ಅಕ್ಕಿ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು, ಅದನ್ನು ಜಾರಿ ಮಾಡಲು 5500 ಕೋಟಿ ಹೊಂದಿಸಬೇಕಿದೆ. ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 1.04ಕೋಟಿ ಯಿಂದ 1.029 ಕೋಟಿ ಕುಟುಂಬಕ್ಕೆ ಏರಿಕೆಯಾಗಿದೆ ಎಂದು ಹೇಳಿದ ಅವರು, ಹಿಂದಿನ ಸರ್ಕಾರದ ಯೋಜನೆಗಳಲ್ಲಿ ಏನೋ ಆಗಿದೆ ಎಂಬ ಕಾರಣಕ್ಕಾಗಿ ಈಗ ಹಣ ಹೊಂದಿಸಲು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಬೆಂಗಳೂರಿನಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣ:
ಬೆಂಗಳೂರಿಗೆ ಸರ್ಕಾರದ ಕೊಡುಗೆ ಏನು ಎಂಬ ಪ್ರಶ್ನೆಗಳು ಬರುತ್ತಿವೆ. ನಾನು 12 ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದೆ ಅದಕ್ಕಾಗಿ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆಯೂ ಜಾರಿಯಾಗಿತ್ತು. ಅನಂತರ ಯೋಜನೆ ನೆನೆಗುದಿಗೆ ಬಿದ್ದಿದೆ. ಆದರೆ, ಈಗ ನಮ್ಮ ಸರ್ಕಾರ ಮತ್ತೆ ಯೋಜನೆಗೆ ಚಾಲನೆ ನೀಡುತ್ತಿದ್ದು, ಮುಂದಿನ ಸಂಪುಟದಲ್ಲಿ ಇದಕ್ಕೆ ಅನುಮತಿ ನೀಡಲಾಗುವುದು. ಮೊದಲ ಕಂತಿನಲ್ಲಿ ಎರಡು ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗುವುದು. ಮುಂದಿನ ವರ್ಷ 4500 ಕೋಟಿ ಹಣ ಖರ್ಚು ಮಾಡಲಾಗುವುದು. ಶೀಘ್ರವೇ ಟೆಂಡರ್ ಕರೆದು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಮುಂದಿನ ತಿಂಗಳಿನಿಂದಲೇ ಯೋಜನೆ ಪ್ರಾರಂಭಿಸಲಾಗುತ್ತದೆ. ಆರೂವರೆ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಮೂರು ತಿಂಗಳಲ್ಲಿ ಮುಗಿಸಲಾಗುವುದು. ರಸ್ತೆ ಮಧ್ಯೆ ಮೆಟ್ರೋಗೂ ಜಾಗ ಕಲ್ಪಿಸಲಾಗುವುದು ಎಂದರು.

ಎಲಿವೇಟೆಡ್ ರಸ್ತೆ ನಿರ್ಮಾಣ ವಿಷಯವೂ ಚರ್ಚೆಯಾಗುತ್ತಿದೆ. 102 ಕಿ.ಮೀ ಉದ್ದದ ಈ ಯೋಜನೆ ಅಗತ್ಯವೇ ಅನವತ್ಯವೇ ಎಂಬ ಚರ್ಚೆ ನಡುವೆ ಇದನ್ನು ಜಾರಿ ಮಾಡಲು ನಾವು ಬದ್ಧರಾಗಿದ್ದೇವೆ. ಎಲಿವೇಟೆಡ್ ರಸ್ತೆ ನಿರ್ಮಾಣವಾದರೆ ಪೆಟ್ರೋಲ್ ಉಳಿತಾಯ, ಸಮಯ ಉಳಿತಾಯ ಎಲ್ಲಾ ಲಾಭನಷ್ಟಗಳನ್ನು ವೈಜ್ಞಾನಿಕವಾಗಿ ಜನರ ಮುಂದಿಡಲಾಗುವುದು. ವರ್ಷಕ್ಕೆ 9 ಸಾವಿರ ಕೋಟಿ ಉಳಿತಾಯವಾಗುವ ಅಂದಾಜಿದೆ. ಒಂದೂವರೆ ತಿಂಗಳಿನಲ್ಲಿ ಇದರ ನೀಲನಕ್ಷೆ ತಯಾರಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು.ಬಡವರ ಮನೆಗಳು ಈ ಯೋಜನೆಯಿಂದ ಹಾಳಾಗದಂತೆ ನಕ್ಷೆ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಬಿಬಿಎಂಪಿ ವರ್ಷಕ್ಕೆ 100 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಎಲ್‍ಇಡಿ ಬಲ್ಪ್‍ಗಳನ್ನು ಅಳವಡಿಸಿದರೆ ಈ ಹಣ ಉಳಿಸಲು ಸಾಧ್ಯ. ಖಾಸಗಿ ವ್ಯಕ್ತಿಯೊಬ್ಬರು ಎಲ್‍ಇಡಿ ಬಲ್ಪ್ ಅಳವಡಿಸಲು ಮುಂದೆ ಬಂದಿದ್ದರೆ.. ವಿದ್ಯುತ್ ಬಿಲ್ ಸಂಗ್ರಹದಲ್ಲಿ ಶೇ.85ರಷ್ಟನ್ನು ಅವರು ಇಟ್ಟುಕೊಂಡು. ಶೇ.15ರಷ್ಟನ್ನು ಬಿಬಿಎಂಪಿಗೆ ಪಾವತಿಸುತ್ತಾರೆ. ಮುಂದಿನ ಎರಡನೇ ಸಂಪುಟಸಭೆಯಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗುವುದು ಎಂದರು.

ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಹಿಂದಿನ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆರಬೇಕಾಗಿದೆ. ರಸ್ತೆಯಲ್ಲಿ ಕಸ ಬಿದ್ದಿರುವುದನ್ನು ನೋಡಿದಾಗ ಮುಖ್ಯಮಂತ್ರಿಯಾಗಿ ನಾನು ತಲೆ ತಗ್ಗಿಸುವಂತಾಗಿದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ನಾನು ಟೆಂಪಲ್ ರನ್ ಅಷ್ಟೇ ಮಾಡುತ್ತಿಲ್ಲ. ಅಭಿವೃದ್ಧಿಯತ್ತ ಗಮನ ಕೊಡುತ್ತಿದ್ದೇನೆ. ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದೆ. ಹಾಗಾಗಿ ದೇವರ ದರ್ಶನಕ್ಕೆ ಭೇಟಿ ನೀಡುವುದು ಸಾಮಾನ್ಯ. ನಾನು ಸಮಯ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆಕ್ಷೇಪಗಳಿವೆ. ದಿನನಿತ್ಯ ಜನಸಾಮಾನ್ಯರನ್ನು ಭೇಟಿ ಮಾಡುವ ಮುಖ್ಯಮಂತ್ರಿ ನಾನು. ಅಂತಹ ಒತ್ತಡಗಳಿಂದಾಗಿ ಸಮಯ ಪಾಲನೆ ಕಷ್ಟ. ನಾನು ಉದ್ದೇಶ ಪೂರ್ವಕವಾಗಿ ವಿಳಂಬವಾಗಿ ಬರುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ