ಮೆರಿಟ್ ಆಧಾರದ ಮೇಲೆ ಅಧಿಕಾರಿಗಳ ನಿಯೋಜನೆ ಮಾಡಲಾಗುತ್ತಿದೆ: ವಿಪಕ್ಷಗಳಿಗೆ ಸಿಎಂ ಟಾಂಗ್

ಬೆಂಗಳೂರು, ಅ.23- ನನ್ನ ಕಚೇರಿಯಲ್ಲಿ ಪೇಮೆಂಟ್ ಸೀಟಿನ ವರ್ಗಾವಣೆಗೆ ಅವಕಾಶವಿಲ್ಲ. ಮೆರಿಟ್ ಆಧಾರದ ಮೇಲೆ ಅಧಿಕಾರಿಗಳನ್ನು ಸೂಕ್ತ ಹುದ್ದೆಗಳಿಗೆ ನಿಯೋಜನೆ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿಯವರು ಆರೋಪ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಕಚೇರಿಯಲ್ಲಿ ಪೇಮೆಂಟ್ ಸೀಟಿಗೆ ಅವಕಾಶವಿಲ್ಲ ಓನ್ಲಿ ಮೆರಿಟ್ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿನ ಡ್ಯಾನ್ಸ್ ಬಾರ್‍ಗಳಲ್ಲಿ ಒಂದು ರಾತ್ರಿ 5 ಕೋಟಿ ಹಣ ಸಂಗ್ರಹಿಸುತ್ತಾರೆ. ಹೈದರಾಬಾದ್-ಬಾಂಬೆಯಿಂದ ವಿಶೇಷ ವಿಮಾನದಲ್ಲಿ ಮಟ್ಕಾ ಪರಿಣಿತರನ್ನು ಕರೆತಂದು ಆಟವಾಡಿಸುತ್ತಿದ್ದಾರೆ. ಇದನ್ನೆಲ್ಲಾ ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ರೌಡಿ ಸಣ್ಣವನಿರಲಿ, ದೊಡ್ಡವನಿರಲಿ ಆತನನ್ನು ಮಟ್ಟಹಾಕಬೇಕು. ಬೆಂಗಳೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿಯಂತಹ ನಗರಗಳಲ್ಲಿ ಸಮಾಜಘಾತುಕ ಶಕ್ತಿಗಳು ಅಮಾಯಕರ ಕೊಲೆ ಮಾಡುತ್ತಿರುವುದನ್ನು ತಡೆಯಬೇಕು. ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಸಿಸಿ ಟಿವಿ ಅಳವಡಿಸಲು ಒಂದರಿಂದ ಎರಡು ಸಾವಿರ ಕೋಟಿ ಖರ್ಚಾದರೂ ಚಿಂತೆಯಿಲ್ಲ. ಕ್ರಮ ಕೈಗೊಳ್ಳುತ್ತೇವೆ. ಸಿಸಿ ಟಿವಿ ನಿರ್ವಹಣೆಯ ಖಾಯಂ ವ್ಯವಸ್ಥೆ ಮಾಡುತ್ತೇವೆ. ಕಾನೂನು ಬಾಹಿರ ಚಟುವಟಿಕೆ ಮಟ್ಟ ಹಾಕುವಲ್ಲಿ ರಾಜಿಯಾಗುವುದಿಲ್ಲ ಎಷ್ಟೇ ಒತ್ತಡ ಬಂದರೂ ಮಣಿಯುವುದಿಲ್ಲ. ಬೆಂಗಳೂರಿಗೆ ಮೂರ್ನಾಲ್ಕು ಮಂದಿ ಅಧಿಕಾರಿಗಳನ್ನು ನಿಯೋಜಿಸಿದ್ದು, ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ ಪೆÇಲೀಸ್ ಮಹಾನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಯುಧ ಪೂಜೆ ವೇಳೆ ಶಸ್ತ್ರಾಸ್ತ್ರಗಳನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ ಮುತ್ತಪ್ಪ ರೈಗೆ ಈಗಾಗಲೇ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಎರಡು ಬಾರಿ ಕರೆಸಲಾಗಿದೆ. ಅವರಿಗೆ ಭದ್ರತೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಯ ಏಳು ಮಂದಿಯನ್ನು ಬಂಧಿಸಲಾಗಿದೆ. ಆಯುಧಗಳ ಮಾಹಿತಿ ಮತ್ತು ಅವುಗಳ ಪರವಾನಗಿಯನ್ನು ಸಿಸಿಬಿಯ ಅಧಿಕಾರಿ ಗಿರೀಶ್ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಉದ್ಧಟತನ ವರ್ತನೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಭ್ರಷ್ಟ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಿ ಲೋಕಾಯುಕ್ತದಿಂದ ಬಂದ ಶಿಫಾರಸುಗಳನ್ನು ನಮ್ಮ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಯಾವ ಅಧಿಕಾರಿಗಳನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಬಿರುಗಾಳಿ ಎಬ್ಬಿಸಿರುವ ಮೀ ಟೂ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಮಾರು 10-12 ವರ್ಷದ ಹಿಂದಿನ ಘಟನೆಗಳು ಈಗ ಪ್ರಸ್ತಾಪವಾಗುತ್ತಿವೆ. ಕಾನೂನು ತಜ್ಞರು ಅದರ ಬಗ್ಗೆ ಏನು ಹೇಳುತ್ತಾರೋ ಕಾದು ನೋಡುತ್ತೇನೆ ಎಂದು ಹೇಳಿದರು.

ಶಬರಿಮಲೆ ಯಾತ್ರೆಗೆ ಹೋಗುವ ಮಹಿಳೆಯರಿಗೆ ರಕ್ಷಣೆ ನೀಡುವುದು ಕೇರಳ ಸರ್ಕಾರದ ಜವಾಬ್ದಾರಿ. ಒಕ್ಕೂಟ ವ್ಯವಸ್ಥೆಯಲ್ಲಿ ಇನ್ನೊಂದು ರಾಜ್ಯದ ಮೇಲೆ ಅನಪೇಕ್ಷಿತ ಒತ್ತಡ ಹೇರಲು ಸಾಧ್ಯವಿಲ್ಲ ಅಥವಾ ಇಲ್ಲಿಂದ ಹೋಗುವ ಮಹಿಳೆಯರಿಗೆ ಸ್ಪೆಷಲ್ ಫೆÇೀರ್ಸ್‍ನೊಂದಿಗೆ ಹೋಗಿ ರಕ್ಷಣೆ ನೀಡಲು ಸಾಧ್ಯವಿಲ್ಲ. ಯಾರಾದರೂ ಅಲ್ಲಿಗೆ ಹೋಗಿ ರಕ್ಷಣೆ ಬಯಸಿ ನನಗೆ ಮನವಿ ಮಾಡಿದರೆ ಕೇರಳದ ಮುಖ್ಯಮಂತ್ರಿಗೆ ಪತ್ರ ಬರೆದು ರಕ್ಷಣೆ ನೀಡಿ ಎಂದು ಮನವಿ ಮಾಡಬಹುದಷ್ಟೇ ಎಂದು ಸಿಎಂ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ