ಎರಡು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಿದ್ದೇನೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.23- ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೋ ಗೊತ್ತಿಲ್ಲ. ಇದು ದೇವರು ಕೊಟ್ಟ ಅಧಿಕಾರ. ದೈವ ಪ್ರೇರಣೆಯಿಂದ ಕಾಂಗ್ರೆಸ್ ನನಗೆ ಬೆಂಬಲ ಕೊಟ್ಟಿದೆ. ದೇವರ ಇಚ್ಛೆಯಂತೆ ಐದು ವರ್ಷ ಅಧಿಕಾರ ಪೂರೈಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರೆಸ್‍ಕ್ಲಬ್‍ನಲ್ಲಿಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ನೋಡಬೇಕಾಗಿದೆ. ಎರಡು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಿದ್ದೇನೆ. ನಾನು ದೆಹಲಿಗೆ ಹೋಗಿ ಪ್ರಧಾನಮಂತ್ರಿ, ಕೇಂದ್ರ ಸಚಿವರನ್ನು ನೋಡಿದಾಕ್ಷಣ ಕುಮಾರಸ್ವಾಮಿ ಬಿಜೆಪಿ ಜತೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ.

ದೆಹಲಿಯ ಭೇಟಿಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಹಣ ತರಲು ಪ್ರಯತ್ನಿಸಿದ್ದೇನೆ. ನನ್ನ ಸಹೋದರ ರೇವಣ್ಣ ದೆಹಲಿಗೆ ಬರುವುದು ಸ್ವಾರ್ಥಕ್ಕಾಗಿ ಅಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಪ್ರಸ್ತಾವನೆಗಳೊಂದಿಗೆ ಬರುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಹಲವಾರು ಬಾರಿ ನಮ್ಮ ಜತೆ ಸಹಕರಿಸಿದ್ದಾರೆ. ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್‍ಪ್ರಭು ಅವರನ್ನು ಭೇಟಿ ಮಾಡಿದಾಗ ಕಾಫಿ ಬೆಳೆಗಾರರ ಕಷ್ಟದ ಬಗ್ಗೆ ಚರ್ಚಿಸಿದ್ದು, ಶೇ.50ರಷ್ಟು ನೆರವನ್ನು ನೀಡುವ ಭರವಸೆ ನೀಡಿದ್ದಾರೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ಪ್ರತೀ ಬಾರಿ ರಾಜಕೀಯ ಅಸ್ತಿರತೆಗಳ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಈ ರೀತಿಯ ವದಂತಿಗಳು ಹೆಚ್ಚಾದರೆ ಅಧಿಕಾರಿಗಳು ನನ್ಛ್ನ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸತ್ಯಾಸತ್ಯತೆಯನ್ನು ತಿಳಿದು ವರದಿ ಮಾಡಿ. ನಮ್ಮ ಸರ್ಕಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತು ಪಡಿಸಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.

ಬಿಜೆಪಿಯ ನಾಯಕರು ಇತ್ತೀಚೆಗೆ ದೇವೇಗೌಡರು-ಸಿದ್ದರಾಮಯ್ಯ ಅವರು ಒಂದಾಗಿರುವ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಶ್ರೀರಾಮುಲು, ಸದಾನಂದಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರುಗಳು ಪರಸ್ಪರ ಏನೆಲ್ಲಾ ಮಾತನಾಡಿಕೊಂಡಿದ್ದಾರೆ. ಯಾವ ರೀತಿಯ ಸಂಘರ್ಷವಾಗಿದೆ ಎಂಬುದು ಎಲ್ಲಿರಿಗೂ ಗೊತ್ತು.

ಐದು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶದ ರಾಜಕಾರಣದಲ್ಲಿ ರಾಜ್ಯದ ರಾಜಕಾರಣವೇ ಬಹಳಷ್ಟು ಬಾರಿ ಪ್ರೇರಣೆಯಾಗಿದೆ. ಐದೂ ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಿಗಳು ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಇಲ್ಲದೇ ಹೋದರೆ ಜಾಗ ಖಾಲಿ ಮಾಡಬೇಕೆಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ