ಬೆಂಗಳೂರು,ಅ.17- ಒಂದೆಡೆ ಐತಿಹಾಸಿಕ ದಸರಾ ನಡೆಯುತ್ತಿದರೆ ಇನ್ನೊಂದೆಡೆ ಉಪಚುನಾವಣೆ ರಂಗೇರುತ್ತಿದೆ. ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಸಮರದತ್ತ ರಾಜ್ಯ ರಾಜಕೀಯ ಮುಖಂಡರ ಚಿತ್ತ ನೆಟ್ಟಿದೆ.
ಮೂರೂ ರಾಜಕೀಯ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೆÇೀಟಿ ನಡೆಸುತ್ತಿವೆ, ಇನ್ನು ಗೆಲುವಿಗಾಗಿ ಜಿದ್ದಿಗೆ ಬಿದ್ದಿರುವ ರಾಜಕೀಯ ನಾಯಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಮನಗರ, ಶಿವಮೊಗ್ಗ, ಮಂಡ್ಯ, ಜಮಖಂಡಿ ಮತ್ತು ಬಳ್ಳಾರಿ ಕಡೆ ಪ್ರಯಾಣ ಬೆಳೆಸಿದ್ದಾರೆ.
ಈ ಮಧ್ಯೆ ನವರಾತ್ರಿ, ದಸರಾ, ಆಯುಧ ಪೂಜೆ ಅಂತಾ ಸಾಲು ಸಾಲು ಸರ್ಕಾರಿ ರಜೆಗಳು ಇಡೀ ಶಕ್ತಿ ಸೌಧವನ್ನೇ ಖಾಲಿಯಾಗಿಸಿದೆ.ಮುಂದಿನ ನಾಲ್ಕು ದಿನವೂ ಶಕ್ತಿಸೌಧ ವಿಧಾನಸೌಧ ಪೂರ್ತಿ ಖಾಲಿ ಖಾಲಿ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದಸರಾ ಮತ್ತು ಉಪ-ಚುನಾವಣೆಯಲ್ಲಿ ತಲ್ಲೀನರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕುಮಾರಸ್ವಾಮಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ-ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಮುಂದಿನ ನಾಲ್ಕು ದಿನಗಳ ಕಾಲ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇನ್ನೊಂದೆಡೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಜಮಖಂಡಿಯಲ್ಲಿ ಠಿಕ್ಕಾಣಿ ಹೂಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯೇ ಜಮಖಂಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಒಂದು ಕಡೆ ಸಾಲು ಸಾಲು ಸರ್ಕಾರಿ ರಜೆಗಳ ಜೊತೆಗೆ ದಸರಾ ಸಂಭ್ರಮ, ಮತ್ತೊಂದೆಡೆ ರಾಜ್ಯದಲ್ಲಿ ಎದುರಾಗಿರುವ ಅನಿರೀಕ್ಷಿತ ಉಪ-ಚುನಾವಣೆಯಿಂದ ವಿಧಾನಸೌಧ ಖಾಲಿ ಹೊಡೆಯುತ್ತಿದೆ. ಶಕ್ತಿಸೌಧದಲ್ಲಿ ಏನಾದರೂ ಕೆಲಸವಾಗಬೇಕು ಎಂದಿದ್ದರೆ ಅದು ಮುಂದಿನ ಸೋಮವಾರದಿಂದಲೇ ಎಂದು ಹೇಳಲಾಗುತ್ತಿದೆ.
ರಾಜಕೀಯ ಪಕ್ಷಗಳಲ್ಲೂ ಅದೇ ಸ್ಥಿತಿ:
ಕಳೆದ ಒಂದು ತಿಂಗಳಿಂದ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದ ಬೆಂಗಳೂರು ಮಹಾನಗರ ಇಂದು ಯಾವುದೇ ಚಟುವಟಿಕೆಗಳಿಲ್ಲದೇ ಸ್ಥಬ್ಧವಾಗಿದೆ.
ಯಾವುದೇ ರಾಜಕೀಯ ಪಕ್ಷದ ಕಚೇರಿಯ ಮುಂದೂ ಕಾರ್ಯಕರ್ತರಿಲ್ಲ, ಒಳಗೂ ನಾಯಕರಿಲ್ಲ. ಎಲ್ಲರೂ ಶಕ್ತಿ ಕೇಂದ್ರದಿಂದ ದೂರವಿದ್ದಾರೆ. ನಿನ್ನೆ ರಾತ್ರಿಯವರೆಗೂ ರಾಜಕೀಯ ಚಟುವಟಿಕೆಗಳ ಮೂಲಕ ಗಿಜುಗುಡುತ್ತಿದ್ದ ಪಕ್ಷದ ಕಚೇರಿಗಳು ಬಿಕೋ ಎನ್ನುತ್ತಿವೆ.
ಕ್ವೀನ್ಸ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕೇಂದ್ರ ಕಚೇರಿ, ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಾದ ಜಗನ್ನಾಥ ಭವನ, ಶೇಷಾದ್ರಿಪುರದಲ್ಲಿರುವ ಜಾತ್ಯತೀತ ಜನತಾದಳ ಪಕ್ಷದ ಕೇಂದ್ರ ಕಚೇರಿಯಾದ ಜೆ.ಪಿ.ಭವನದಲ್ಲಿ ಇಂದು ನಾಯಕರು, ಕಾರ್ಯಕರ್ತರಿಲ್ಲದೇ ಬಣಗುಡುತ್ತಿದೆ.
ಇದು ಮಾತ್ರವಲ್ಲ, ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸ, ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸ, ಸದಾಶಿವನಗರದಲ್ಲಿರುವ ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕುಮಾರಕೃಪ ರಸ್ತೆಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸ, ಸಿಎಂ ಗೃಹ ಕಚೇರಿ ಕೃಷ್ಣಾ ಸೇರಿದಂತೆ ಯಾವುದೇ ರಾಜಕೀಯ ಮುಖಂಡರ ನಿವಾಸ ಹಾಗೂ ಕಚೇರಿಗಳಲ್ಲಿಯೂ ಕಾರ್ಯಕರ್ತರು ಕಾಣಿಸಲಿಲ್ಲ.
ಬಲಪ್ರದರ್ಶನ
ಒಟ್ಟಾರೆ ಉಪಚುನಾವಣೆಯನ್ನು ಮೂರು ಪಕ್ಷಗಳೂ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ನಾಮಪತ್ರ ಸಲ್ಲಿಕೆ ಹೆಸರಿನಲ್ಲಿ ಬಲ ಪ್ರದರ್ಶನ ತೋರಿಸುತ್ತಿದ್ದಾರೆ.ಒಟ್ಟಾರೆ ಈ ಚುನಾವಣೆ ಫಲಿತಾಂಶ ಯಾವುದೇ ರೀತಿಯಲ್ಲಿಯೂ ರಾಜಕೀಯ ಬದಲಾವಣೆಗೆ ಪಾತ್ರವಾಗದಿದ್ದರೂ, ಸಾಕಷ್ಟು ಪ್ರತಿಷ್ಠೆಯಾಗಿ ಮೂರು ಪಕ್ಷಕ್ಕೆ ಪರಿಗಣನೆಯಾಗಿರುವುದು ಸತ್ಯ.ಇದರಿಂದಲೇ ಗೆಲುವಿಗಾಗಿ ಮೂರು ಪಕ್ಷಗಳು ಸಾಕಷ್ಟು ಶ್ರಮಿಸುತ್ತಿವೆ. ಅಲ್ಲದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಇದು ಮೊದಲ ಸತ್ವಪರೀಕ್ಷೆ ಕೂಡ ಆಗಿದೆ.