ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಲಕ್ಷ್ಮೀ ಮಂಟಪ ಮಹಿಳಾ ಅಧಿಕಾರಿಯ ಪ್ರವೇಶದ ವಿವಾದ

ಬೆಂಗಳೂರು,ಅ.17- ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಿಲ್ಲೆಯ ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯ ಗರ್ಭಗುಡಿ ಹೊರಗಿರುವ ಲಕ್ಷ್ಮೀ ಮಂಟಪಕ್ಕೆ ಉಮಾ ಎಂಬ ಮಹಿಳಾ ಅಧಿಕಾರಿ ಪ್ರವೇಶಿಸಿದ್ದಾರೆ.
ಈ ಹಿಂದೆ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಸುತ್ತಮುತ್ತ ಇದ್ದ ಕೆಲ ಅರ್ಚಕರು ಒಳ ಪ್ರವೇಶಿಸಲು ಅವಕಾಶ ನೀಡಿದ್ದಾರೆ.ಆದರೆ ಮತ್ತೊಂದು ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಅರ್ಚಕರು ಉಮಾ ಅವರನ್ನು ಒಳಗೆ ಬಿಟ್ಟದ್ದು ಸರಿಯಲ್ಲ ಅಂತ ಭಕ್ತರು ದೂರುತ್ತಿದ್ದಾರೆ.ನವರಾತ್ರಿಯ ಸಂದರ್ಭ ಕೊಲ್ಲೂರಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ.ನವರಾತ್ರಿ ಮೊದಲ ದಿನ ಒಬ್ಬರಿಗೆ, ಎರಡೇ ದಿನ ಇಬ್ಬರಿಗೆ, ಹೀಗೆ 9 ದಿನ 9 ಮಂದಿ ಗ್ರಾಮದ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಅವಕಾಶ ಇಲ್ಲಿ ನಡೆದುಕೊಂಡು ಬಂದಿದೆ.

ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು.ಆದರೆ ಉಮಾ ಅವರು ನವರಾತ್ರಿ ದೇವಸ್ಥಾನದ ಭೇಟಿ ಸಂದರ್ಭದಲ್ಲಿ ಒಳ ಹೊಕ್ಕಿರುವುದು ಅಪಚಾರವಾಗಿದೆ.

ಆಡಳಿತಾಧಿಕಾರಿಯಾಗಿದ್ದಾಗ ಉಮಾ ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು.ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು.ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಉಮಾ ಆಡಳಿತಾಧಿಕಾರಿಯಾಗಿದ್ದಾಗ ಅವರ ಅವಧಿಯಲ್ಲಿ ದೇವಸ್ಥಾನದಲ್ಲಿ ಬಹಳ ಅಕ್ರಮ ನಡೆದಿತ್ತು. ಹರಕೆಯಾಗಿ ನೀಡಿದ ಚಿನ್ನವನ್ನು ಅಡವಿಟ್ಟು ದೇವಳದ ಸಿಬ್ಬಂದಿ ಗೋಲ್ ಮಾಲ್ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದೆ.
ಈ ಮಹಿಳಾ ಅಧಿಕಾರಿಗೆ ಲಕ್ಷ್ಮೀ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ