ನೀತಿ ಸಂಹಿತೆ ಜಾರಿ ಹಿನ್ನಲೆ, ಹಂಪಿ ಉತ್ಸವ ಮುಂದೂಡಿಕೆ

ಬೆಂಗಳೂರು,ಅ.17-ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನ.3ರಿಂದ ನಡೆಯಬೇಕಿದ್ದ ಹಂಪಿ ಉತ್ಸವವನ್ನು ಮುಂದೂಡಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ನವೆಂಬರ್ 3ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ಆಚರಿಸಲು ಉದ್ದೇಶಿಸಲಾಗಿತ್ತು.ಆದರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಂಪಿ ಉತ್ಸವವನ್ನು ಮುಂದೂಡುಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೇಸ್-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಜಯ ಡಿ.ಸಿ.ಎಂ.

ಬೆಂಗಳೂರು,ಅ.17-ರಾಜ್ಯದಲ್ಲಿ ನಡೆಯಲಿರುವ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದು, ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ವಿಜಯದಶಮಿ ದಿನದಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದಿಂದ ತೆರಳುವ ಅಂಬೇಡ್ಕರ್‍ರವರ ಅನುಯಾಯಿಗಳ ನಾಗ್ಪುರ ದೀಕ್ಷಾ ಭೂಮಿ ಯಾತ್ರೆಗೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಉಪಚುನಾವಣೆಯ ಫಲಿತಾಂಶ ಮೈತ್ರಿ ಸರ್ಕಾರವನ್ನು ಇನ್ನಷ್ಟು ಸದೃಢಗೊಳಿಸಲಿದೆ.ಬಳ್ಳಾರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿಯೇ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.ಬಳ್ಳಾರಿ ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ವಿ.ಎಸ್.ಉಗ್ರಪ್ಪ ಅವರು ಈ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಒಮ್ಮತದಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ. ಇಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ ಎಂದ ಅವರು, ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ವಿಶ್ಲೇಷಣೆಗೆ ಯಾವುದೇ ಅರ್ಥವಿಲ್ಲ. ಸರ್ಕಾರ ಮುಂದೆಯೂ ಸದೃಢವಾಗಿರಲಿದೆ ಎಂದು ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬವಾಗಿದ್ದು, ಇದು ಪಕ್ಷವನ್ನು ಮೀರಿದ ಹಬ್ಬವಾಗಿದೆ.ಕಾಂಗ್ರೆಸ್ ಶಾಸಕರಿಗೆ ಆಹ್ವಾನ ಸಿಕ್ಕಿಲ್ಲ ಎಂಬ ಆರೋಪ ಸರಿಯಲ್ಲ. ಈ ಬಾರಿ ದಸರಾ ಸಮಿತಿಗಳು ರಚನೆಯೇ ಆಗಿಲ್ಲ. ಆದ್ದರಿಂದ ಸ್ಥಳೀಯ ಶಾಸಕರಿಗೆ ಸಮಿತಿಯಲ್ಲಿ ಅವಕಾಶ ದೊರೆತಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಎಲ್ಲ ಶಾಸಕರಿಗೂ ವೈಯಕ್ತಿಕವಾಗಿ ಆಹ್ವಾನ ನೀಡಿದ್ದಾರೆ.ಗೃಹ ಸಚಿವನಾಗಿ ನಾನು ಪೆÇಲೀಸ್ ಪರೇಡ್‍ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಹಿತರಕ್ಷಣೆಗೆ ರಾಜ್ಯ ಸರ್ಕಾರ 2017ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಜಾರಿ ಮಾಡಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದೆ.ಕಾಯ್ದೆ ಸಂಬಂಧ ಸೆಪ್ಟೆಂಬರ್ 11ರಂದು ತೀರ್ಪು ಬರಬೇಕಿದ್ದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಯನ್ನು ಮುಂದೂಡಲಾಗಿತ್ತು.ಆದರೆ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮತ್ತೆ ಮುಂದೂಡಿರುವುದರಿಂದ ಕಾಯ್ದೆ ಜಾರಿ ವಿಳಂಬವಾಗಿದೆ.ಆದರೂ ಸರ್ಕಾರ ಕಾಯ್ದೆಯನ್ನು ಜಾರಿ ಮಾಡಿ ನೌಕರರ ಹಿತರಕ್ಷಣೆಗೆ ಬದ್ದವಾಗಿದೆ ಎಂದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಿಜಯದಶಮಿ ದಿನದಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಿಂದ 22 ಬಸ್‍ಗಳಲ್ಲಿ ಅಂಬೇಡ್ಕರ್ ಅನುಯಾಯಿಗಳು ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ.
ಒಂದು ವಾರದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ನಾಗ್ಪುರಕ್ಕೆ ತೆರಳಲಿದ್ದು, ಹಜ್ ಮಾದರಿಯಲ್ಲಿ ಆ ಪುಣ್ಯ ಕ್ಷೇತ್ರ ಜನಪ್ರಿಯಗೊಳ್ಳುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ, ದಲಿತ ಮುಖಂಡರಾದ ಡಾ.ವೆಂಕಟಸ್ವಾಮಿ, ಮಾವಳ್ಳಿ ಶಂಕರ್ ಮತ್ತಿತರರು ಇದ್ದರು. ಇದೇ ವೇಳೆ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ