ವಿಧಾನಸೌಧ, ವಿಕಾಸಸೌಧಗಳಿಗೆ ಹೊಸ ಪಾಸ್ ಇರುವ ವಾಹನಗಳಿಗೆ ಮಾತ್ರ ಪ್ರವೇಶಾವಕಾಶ

ಬೆಂಗಳೂರು, ಅ.15- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹಮಹಡಿ ಕಟ್ಟಡಕ್ಕೆ ಪ್ರವೇಶಿಸುವ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳಿಗೆ ಈಗಾಗಲೇ ನೀಡಲಾಗಿದ್ದ ಪಾಸ್‍ಗಳು ರದ್ದುಗೊಂಡಿದ್ದು, ಹೊಸ ಪಾಸ್ ಇರುವ ವಾಹನಗಳಿಗೆ ಮಾತ್ರ ಇಂದಿನಿಂದ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ.

ಈ ಮೂರು ಕಟ್ಟಡಗಳ ಸುರಕ್ಷತೆ ಹಾಗೂ ಹಳೆಯ ಪಾಸ್‍ಗಳ ದುರ್ಬಳಕೆಯ ತಡೆಯುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಅ.5ರಿಂದ ನೀಡಲಾಗಿರುವ ವಿವಿಧ ಬಣ್ಣಗಳ ಹೊಸ ಪಾಸ್‍ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿಯವರ ಸಚಿವಾಲಯ, ಸಚಿವಾಲಯದ ವಿವಿಧ ಇಲಾಖೆಗಳು, ಕ್ಷೇತ್ರ ಇಲಾಖೆಗಳು, ಸಚಿವರು, ಶಾಸಕರ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ವಾಹನಗಳಿಗೆ ಹೊಸ ವಾಹನ ಪಾಸ್‍ಗಳನ್ನು ವಿತರಿಸಲಾಗಿದೆ.

ಪಾಸ್ ಪಡೆಯುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಕೂಡ ಅನ್ವಯವಾಗಿದೆ. ಇಂದಿನಿಂದ ಯಾವುದೇ ಹಳೆ ಪಾಸ್‍ಗಳನ್ನು ಪರಿಗಣಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ