ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಪ್ರತಿಭಟನೆ

ಬೆಂಗಳೂರು, ಅ.15- ಅನುದಾನಿತ ನೌಕರರ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ಬಸವರಾಜ ಹೊರಟ್ಟಿ ಅವರು ನೀಡಿರುವ ಕಾಲ್ಪನಿಕ ವೇತನ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿ 2006ಕ್ಕಿಂತ ಮುಂಚಿನಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ 2006 ಏಪ್ರಿಲ್ 1ರಂದು ನೂತನ ಪಿಂಚಣಿ ಯೋಜನೆ ಜಾರಿ ಮಾಡಿದೆ. 2006ರಲ್ಲಿ ನೇಮಕಗೊಂಡ ತದನಂತರದ ವರ್ಷಗಳಲ್ಲಿ ನೇಮಕಾತಿ ಪತ್ರ ಪಡೆದಿರುವ ನೌಕರರು ರಾಜ್ಯದಲ್ಲಿದ್ದಾರೆ. ಅವರಿಗೆ ಹೊಸ ಯೋಜನೆ ಅನ್ವಯಿಸಲಾಗಿದೆ. ಇದರಿಂದಾಗಿ ಅವರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ ಎಂದು ಅವರು ದೂರಿದರು.

ಸಂಘದ ಗೌರವಾಧ್ಯಕ್ಷ ರಿಯಾಜ್ ಅಹ್ಮದ್ ಸನದಿ ಮಾತನಾಡಿ, ಹೊಸ ಪಿಂಚಣಿ ಯೋಜನೆಯಿಂದಾಗಿ ಸುಮಾರು 35 ಸಾವಿರ ಶಿಕ್ಷಕರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಪಿಂಚಣಿ ಇಲ್ಲದೆ ಈಗಾಗಲೇ ನಿವೃತ್ತಿಯಾಗಿರುವವರಿಗೆ ಮತ್ತು ಸೇವೆಯಲ್ಲಿ ಇರುವಾಗಲೇ ಸಾವನಪ್ಪಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಬೇಕು.

ನೂತನ ಪಿಂಚಣಿ ಯೋಜನೆಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು. ಸರ್ಕಾರ ಹಿರಿಯ ನಾಗರಿಕರಿಗೆ ನಿರ್ದಿಷ್ಟ ಮೊತ್ತದ ಪಿಂಚಣಿ ನೀಡುವ ಯೋಜನೆಗಳನ್ನು ರೂಪಿಸಿದೆ. ಹತ್ತಾರು ವರ್ಷಗಳ ಕಾಲ ಮಕ್ಕಳಿಗೆ ವಿದ್ಯೆ ಬೋಧಿಸಿದ ಶಿಕ್ಷಕರಿಗೆ ಪಿಂಚಣಿ ಯೋಜನೆ ರೂಪಿಸಿಲ್ಲ. ಇದರಿಂದಾಗಿ ಅವರ ಕೊನೆಗಾಲದಲ್ಲಿ ಸಾಮಾಜಿಕ ಭದ್ರತೆ ಇಲ್ಲವಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ