ಝಿಕಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮುಂಜಾಗ್ರತೆ

ಬೆಂಗಳೂರು, ಅ.15- ಮಾರಣಾಂತಿಕ ಝಿಕಾ ವೈರಸ್ ಎಲ್ಲೆಡೆ ಪಸರಿಸುತ್ತಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕರಿಗೆ ಮುಂಜಾಗ್ರತೆ ವಹಿಸಲು ಸೂಚಿಸಿದೆ. ರೋಗದ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ರೋಗಕ್ಕೆ ಕಾರಣ:
ಎಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಸೋಂಕು ಹರಡುತ್ತದೆ. ಇದು ಹೆಚ್ಚಾಗಿ ಹಗಲು ವೇಳೆ ಕಚ್ಚುತ್ತದೆ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿಗೂ ವರ್ಗಾವಣೆಯಾಗುತ್ತದೆ. ದೇಹದೊಳಗೆ ಪ್ರವೇಶ ಮಾಡಿದ ವೈರಸ್ ನ ಪರಿಣಾಮ ಏಳು ದಿನಗಳ ನಂತರ ಆರಂಭವಾಗುತ್ತದೆ. ಚಿಕುನ್ ಗುನ್ಯಾ ರೋಗದಂತೆಯೇ ಇಲ್ಲಿಯೂ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ.

ಈ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಜ್ವರ, ಸ್ನಾಯು ಮತ್ತು ಸಂಧಿ ನೋವು, ತಲೆನೋವು, ಅಸ್ವಸ್ಥತೆ ಇದರ ಲಕ್ಷಣಗಳು. ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳ ಕಾಲ ಕೊನೆಗೊಳ್ಳುತ್ತವೆ. ಈ ರೋಗ ಲಕ್ಷಣಗಳು ಅಧಿಕ ಅವಧಿಯವರೆಗೂ ಇರುವ ಸಾಧ್ಯತೆ ಇರುತ್ತದೆ. ಪರಿಸರದಿಂದಲೂ ಸೋಂಕು ತಗುಲಬಹುದು.

ಗರ್ಭಿಣಿಯರಿಗೆ ಎಚ್ಚರಿಕೆ ಅಗತ್ಯ:
ಗರ್ಭಿಣಿಯರಿಗೆ ಈ ಸೋಂಕು ಇದ್ದರೆ ಅದು ಜನಿಸುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಮಗು ಹುಟ್ಟುವಾಗಲೇ ವಿರೂಪಗಳೊಂದಿಗೆ ಜನಿಸಲು ಕಾರಣವಾಗಬಹುದು. ಗರ್ಭಪಾತಕ್ಕೂ ಇದು ಕಾರಣವಾಗಬಹುದು.

ಈ ಸೋಂಕಿನಿಂದ ಮಕ್ಕಳು ಮತ್ತು ವಯಸ್ಕರಲ್ಲಿ ನರರೋಗಗಳಿಗೂ ಕಾರಣವಾಗಬಹುದು.
ಉಗಾಂಡದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆ:
ಝಿಕಾ ವೈರಸ್ 1947ರಲ್ಲಿ ಉಗಾಂಡದ ಮಂಗಗಳಲ್ಲಿ ಮೊದಲ ಬಾರಿಗೆ ಕಂಡುಬಂತು. ನಂತರ 1952ರಲ್ಲಿ ಉಗಾಂಡ ಮತ್ತು ತಾಂಜೇನಿಯಾದಲ್ಲಿ ಮಾನವರಿಗೂ ಹರಡಿತು. ಆಫ್ರಿಕಾ, ಏಷ್ಯಾ ಮತ್ತು ಫೆಸಿಪಿಕ್ ದೇಶಗಳಲ್ಲೂ ಇದು ಕಾಣಿಸಿಕೊಂಡು ಜನರು ಗಾಬರಿಯಾಗುವಂತೆ ಮಾಡಿತು. ಈ ಸೋಂಕಿನಿಂದ ರೋಗನಿರೋಧಕ ಶಕ್ತಿ ಕುಗ್ಗುವುದು ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ.

ಲೈಂಗಿಕತೆ:
ಇದು ಲೈಂಗಿಕತೆಯ ಮೂಲಕವೂ ಹರಡಬಲ್ಲದು. ವೀರ್ಯ, ರಕ್ತ, ಮೂತ್ರ, ಲವಣ, ಮೆದುಳು ಮತ್ತು ಬೆನ್ನುಹುರಿಗಳಲ್ಲಿ ಕಂಡು ಬರುವ ದೇಹ ದ್ರವಗಳಲ್ಲಿ ಝಿಕಾ ವೈರಸ್ ಅನ್ನು ಪತ್ತೆಹಚ್ಚಲಾಗಿದೆ. ಗರ್ಭಾವಸ್ಥೆಯಲ್ಲಿ ತಾಯಿಗೆ ಈ ಸೋಂಕು ತಗುಲಿದರೆ ಮಗುವಿಗೂ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಕ್ತದಾನ:
ರಕ್ತ ಪಡೆಯುವುದರಿಂದಲೂ ಈ ಸೋಂಕು ಹರಡುವುದು. ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಈ ವೈರಸ್ ಇರುತ್ತದೆ. ಹಾಗಾಗಿ ರಕ್ತ ಪಡೆಯುವ ಮೊದಲು ಸೂಕ್ತ ರೀತಿಯ ರಕ್ತ ಪರೀಕ್ಷೆ ಮಾಡಿಸಿಯೇ ಪಡೆಯಬೇಕು. ಈ ವಿಚಾರವಾಗಿ ಇನ್ನೂ ತನಿಖಾ ಅಧ್ಯಯನಗಳು ನಡೆಯುತ್ತಿವೆ.

ಇದುವರೆಗಿನ ಸಂಶೋಧನೆ ಮತ್ತು ಅಧ್ಯಯನಗಳ ಪ್ರಕಾರ ಝಿಕಾ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಅದರ ಲಕ್ಷಣಗಳು ಅಷ್ಟು ಬೇಗ ಬೆಳಕಿಗೆ ಬರುವುದಿಲ್ಲ. ಈ ರೋಗ ಲಕ್ಷಣಗಳು ಕಂಡುಬಂದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡು ದ್ರವರೂಪದ ಆಹಾರವನ್ನು ಸೇವಿಸಬೇಕು.
ಜ್ವರ ಮತ್ತು ನೋವು ಕಡಿಮೆ ಮಾಡಿಕೊಳ್ಳಲು ಸಾಮಾನ್ಯ ಔಷಧ ಪಡೆದುಕೊಳ್ಳಬೇಕು. ರೋಗ ಹೆಚ್ಚಾದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಝಿಕಾ ವೈರಸ್ ಇರುವ ಪ್ರದೇಶದ ಗರ್ಭಿಣಿಯರು ಅಗತ್ಯವಾಗಿ ರಕ್ತ ಪರೀಕ್ಷೆ ನಡೆಸಿಕೊಂಡು ವೈದ್ಯರ ಸಲಹೆ ಪಡೆಯಬೇಕು.

ಮುನ್ನಚ್ಚರಿಕೆ:
ಎಡಿಸ್ ಸೊಳ್ಳೆ ಹಗಲು ಅಥವಾ ಸಂಜೆ ಹೊತ್ತು ಕಡಿಯುವುದರಿಂದ ಈ ವೇಳೆ ಗರ್ಣಿಣಿಯರು, ಮಕ್ಕಳು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ದೇಹಪೂರ್ತಿ ಮುಚ್ಚುವ ವಸ್ತ್ರ ಧರಿಸಿ, ಸೊಳ್ಳೆಗಳ ಕಡಿತದಿಂದ ಪಾರಾಗಬಹುದು. ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ಬಾಗಿಲುಗಳನ್ನು ಮುಚ್ಚುವುದು, ಕೀಟ ನಿವಾರಕಗಳನ್ನು ಬಳಸುವುದರಿಂದ ಈ ಸೊಳ್ಳೆಯಿಂದ ಪಾರಾಗಬಹುದು.

ಬೆಳಗಿನ ಹೊತ್ತು ಗರ್ಣಿಣಿಯರು ಅಥವಾ ಮಕ್ಕಳು ಕಡ್ಡಾಯವಾಗಿ ಸೊಳ್ಳೆ ಪರದೆಯೊಳಗೆ ಮಲಗಬೇಕು. ಸೋಂಕು ಇರುವ ಪ್ರದೇಶಕ್ಕೆ ಹೋಗುವಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಇಲ್ಲದಿದ್ದರೆ ಈ ಕ್ಷೇತ್ರಗಳಿಗೆ ಹೋಗದಿರುವುದು ಉತ್ತಮ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ