ಬೆಂಗಳೂರು, ಅ.15-ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಧುಬಂಗಾರಪ್ಪ ಅವರು ಅಭ್ಯರ್ಥಿಯಾಗಿರುವುದು ದೇವರ ನಿರ್ಣಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಹಳಷ್ಟು ಸಮರ್ಥ ಅಭ್ಯರ್ಥಿಗಳಿದ್ದರೂ ಸಹ ಉಭಯ ಪಕ್ಷಗಳ ನಾಯಕರು ಸಮಾಲೋಚಿಸಿ ಮಧು ಅವರನ್ನೇ ಸಮರ್ಥ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಹಿನ್ನಡೆಯಾಗಿತ್ತು. ಆದರೆ ಅವರು ಸೋಲುತ್ತಾರೆ ಎಂದು ನಾವು ಕನಸು ಮನಸ್ಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ ಎಂದರು.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಮಧುಬಂಗಾರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ತಾವೂ ಉಪಸ್ಥಿತರಿರುವುದಾಗಿ ಹೇಳಿದ ಅವರು, ಕಂದಾಯ ಸಚಿವ ದೇಶಪಾಂಡೆ ಅವರು ಹಾಜರಿರುತ್ತಾರೆ ಎಂದರು.
ನನಗೂ ಕೂಡ ಯುವ ನಾಯಕರಾದ ಮಧುಬಂಗಾರಪ್ಪ ಅವರನ್ನು ಮೈತ್ರಿ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲ ಎಂಬ ಕೊರಗಿತ್ತು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರು ತಮ್ಮನ್ನು ಮಗನಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು. ಹೋರಾಟದ ಸ್ಫೂರ್ತಿಯನ್ನು ಕೊಟ್ಟಿದ್ದರು. ಮಧು ಬಂಗಾರಪ್ಪ ಮತ್ತು ತಮ್ಮ ನಡುವೆ ಒಡಹುಟ್ಟಿದ ಸೋದರರ ಭಾವನೆ ಇದೆ ಎಂದ ಮುಖ್ಯಮಂತ್ರಿ, ಈ ಬಾರಿ ಉಪಚುನಾವಣೆಯಲ್ಲಿ ಶಿವಮೊಗ್ಗ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ಪಕ್ಷಗಳ ಮೈತ್ರಿ 2019ರ ಲೋಕಸಭೆ ಚುನಾವಣೆಯಲ್ಲಿ ಸಾರಥ್ಯ ವಹಿಸಲು ಜನರು ಆಶೀರ್ವಾದ ಮಾಡಲಿದ್ದಾರೆ ಎಂದರು.
ಮತದಾರರಲ್ಲಿ ಗೊಂದಲವಿಲ್ಲ:
ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದಾಗಲೇ ಸ್ಥಳೀಯ ಪಕ್ಷದ ಕಾರ್ಯಕರ್ತರು, ಜನರು ನಿಮ್ಮ ಕುಟುಂಬದವರೇ ಸ್ಪರ್ಧೆ ಮಾಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಮಾಜಿ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದರು.
ನಿನ್ನೆ ರಾತ್ರಿ ವಿದೇಶದಿಂದ ಆಗಮಿಸಿದ ಮಧು ಬಂಗಾರಪ್ಪ ಹಾಗೂ ಅವರ ಸಹೋದರಿ ಗೀತಾ ಶಿವರಾಜ್ಕುಮಾರ್ ಅವರೊಂದಿಗೆ ತಾವು ಚರ್ಚೆ ನಡೆಸಿ ನಂತರ ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಎ ಮತ್ತು ಬಿ ಫಾರಂ ಅನ್ನು ಪಡೆಯಲಾಗಿದೆ ಕುಮಾರಸ್ವಾಮಿ ತಿಳಿಸಿದರು.
ರಾಮನಗರ ಜನತೆ ತಮ್ಮನ್ನು ಮಗನಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ನಾವು ಪ್ರತಿ ಗ್ರಾಮಕ್ಕೆ ಹೋಗದಿದ್ದರೂ ಚುನಾವಣೆಗೆ ನಿಂತಾಗ ಆಶೀರ್ವಾದ ಮಾಡಿದ್ದಾರೆ. ವೈಯಕ್ತಿಕ ಉದ್ದೇಶಕ್ಕಾಗಿ ಅನಿತಾಕುಮಾರಸ್ವಾಮಿ ಈಗ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ಕುಡಿ ಬರಬಹುದು ಎಂದು ಪ್ರಸ್ತಾಪವಾಗುತ್ತಿತ್ತು. ಅದು ಹುಸಿಯಾಗಿದೆ. ಚುನಾವಣೆಯಲ್ಲೂ ಕಾರ್ಯಕರ್ತರು ಮತ್ತು ಜನರ ವಿರುದ್ಧ ವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ. ಕಾಲವೇ ಉತ್ತರ ಕೊಡಲಿದೆ. ಈ ಚುನಾವಣೆಯಲ್ಲಿ ಜನರೇ ಸೂಕ್ತ ತೀರ್ಮಾನ ನೀಡಲಿದ್ದಾರೆ ಎಂದರು.
ವಿಧಾನಪರಿಷತ್ ಅಭ್ಯರ್ಥಿ ಆಕಾಂಕ್ಷಿಯಾಗಿರಲಿಲ್ಲ:
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿ ತಾವು ಆಗಿರಲಿಲ್ಲ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಸ್ಪಷ್ಟಪಡಿಸಿದರು. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಗೆ ನಾನೇ ಮನವಿ ಮಾಡಿಕೊಂಡಿದ್ದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವ ಜೆಡಿಎಸ್ನ ಎಲ್ಲಾ ನಾಯಕರಿಗೆ, ಸ್ಥಳೀಯ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಸದೃಢವಾಗಿ ಮುಂದುವರೆಯಲು ತಮ್ಮ ಸ್ಪರ್ಧೆ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಟ ಮಾಡಿ ಜನರ ಆಶೀರ್ವಾದ ಪಡೆಯುವ ವಿಶ್ವಾಸವಿದೆ. ಸಂತೋಷವಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ತಮ್ಮ ತಂದೆ ಎಸ್.ಬಂಗಾರಪ್ಪ ಅವರು ಕೊನೆಯ ಚುನಾವಣೆಯಲ್ಲಿ ಸೋತಿದ್ದ ನೋವು ನನಗೂ ಮತ್ತು ಅವರ ಅಭಿಮಾನಿಗಳಲ್ಲಿತ್ತು ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.