ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಕೆ

ಬೆಂಗಳೂರು, ಅ.15-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಧುಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ವಿದೇಶ ಪ್ರವಾಸದಿಂದ ಮರಳಿರುವ ಅವರು, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಪಕ್ಷದ ಬಿ ಫಾರಂ ಅನ್ನು ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಉಭಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಧುಬಂಗಾರಪ್ಪ ನಿರ್ಧರಿಸಲಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದ್ದಾರೆ.

ವಿದೇಶ ಪ್ರವಾಸದಿಂದ ಮಧುಬಂಗಾರಪ್ಪ ಅವರು ಮರಳಿದ್ದು, ತರಾತುರಿಯಲ್ಲಿ ನಾಮಪತ್ರ ಸಲ್ಲಿಸುತ್ತಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಾಮಪತ್ರ ಸಲ್ಲಿಸುವ ಬಗ್ಗೆ ನಿರ್ಧರಿಸಲಿದ್ದಾರೆ. ಈಗಾಗಲೇ ಉಭಯ ಪಕ್ಷಗಳ ನಾಯಕರು ಒಮ್ಮತದ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎಂಬ ಮುನ್ನಚ್ಚರಿಕೆಯಿಂದ ಉಭಯ ಪಕ್ಷಗಳ ನಾಯಕರ ವಿಶ್ವಾಸ ಪಡೆಯುವ ಪ್ರಯತ್ನ ಮಾಡಿದ್ದಾರೆ.

ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು ವಿದೇಶ ಪ್ರವಾಸದಲ್ಲಿದ್ದರು. ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ಚುನಾವಣೆಯನ್ನು ಉಭಯ ಪಕ್ಷಗಳು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಕಾರ್ಯತಂತ್ರ ರೂಪಿಸುವ ಕುರಿತಂತೆಯೂ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ಸಂದರ್ಭದಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ