ಉಪಚುನಾವಣೆ ಮುಂಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಸೆಮಿಫೈನಲ್: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.15-ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಮುಂಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಆಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪವಿತ್ರ ಮೈತ್ರಿಯೋ, ಅಪವಿತ್ರ ಮೈತ್ರಿಯೋ ಎಂಬುದು ಈ ಚುನಾವಣೆಯಲ್ಲಿ ತೀರ್ಮಾನವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತಾ ನ್ಯಾಯಾಲಯದ ತೀರ್ಪೇ ಅಂತಿಮವಾಗಲಿದೆ ಎಂದರು.

ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿಯವರು ಅಪವಿತ್ರ ಮೈತ್ರಿ ಎಂದು ಉಗ್ರ ಹಾಗೂ ಕಠೋರ ಶಬ್ಧಗಳಿಂದ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಚುನಾವಣಾ ಫಲಿತಾಂಶದ ನಂತರ ಬದಲಾಗುತ್ತಾರೆ ಎಂಬ ನಿರೀಕ್ಷೆ ಇದೆ. ಉಪಚುನಾವಣೆಯ ಫಲಿತಾಂಶದ ನಂತರ ಬಿಜೆಪಿ ಆಪರೇಷನ್ ಕಮಲದಂತಹ ವ್ಯರ್ಥ ಕಸರತ್ತನ್ನು ನಿಲ್ಲಿಸಬಹುದು ಎಂದರು.

ನಾವು ಆಪರೇಷನ್ ಜೆಡಿಎಸ್ ಮಾಡುವುದಿಲ್ಲ. ಮಾಡುವುದಿದ್ದರೆ ಈಗಾಗಲೇ ಮಾಡುತ್ತಿದ್ದೆವು ಎಂದು ಸ್ಪಷ್ಟಪಡಿಸಿದರು.
ಈ ಉಪಚುನಾವಣೆ ಮುಂದಿನ ಲೋಕಸಭೆಗೂ ರಾಜ್ಯಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಎಸ್‍ಪಿ ಹೊಂದಾಣಿಕೆಯಿಂದ ಹೋಗಲು ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನ ನಾಯಕರು ಸಮಾಲೋಚನೆ ನಡೆಸಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಅದರಂತೆ ರಾಮನಗರ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗಳು, ಜಮಖಂಡಿ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲಾ ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಚುನಾವಣಾ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಲೋಕಸಭೆ ಉಪಚುನಾವಣೆಯನ್ನು ನಿರೀಕ್ಷಿಸಿರಲಿಲ್ಲ. ಆದರೂ ಎದುರಾಗಿರುವ ಚುನಾವಣೆಯನ್ನು ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಎದುರಿಸುತ್ತಿವೆ ಎಂದರು.
ನಾಡಿನ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಬದಲಾವಣೆ ತರಬೇಕಾಗಿದ್ದು, ನಾಡನ್ನು ಕಟ್ಟುವ ರೀತಿಯಲ್ಲಿ ಈ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್‍ನ ಕಾರ್ಯಕರ್ತರು ತಮ್ಮ ವೈಯಕ್ತಿಕ ಸಂಘರ್ಷಗಳನ್ನು ಸಂಪೂರ್ಣ ಬದಿಗಿಟ್ಟು ಕಾಂಗ್ರೆಸ್- ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕು. ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಂದೇ ತಾಯಿ ಮಕ್ಕಳಂತೆ ಉಪಚುಣಾವಣೆಯಲ್ಲಿ ಹೋರಾಟ ಮಾಡಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದರು.

ತಾವು ಆರೂವರೆ ಕೋಟಿ ಜನರ ಪರವಾಗಿ ಕೆಲಸ ಮಾಡುತ್ತಿದ್ದು, ಅಧಿಕಾರದಲ್ಲಿದ್ದು ಪಕ್ಷಭೇದ ಮಾಡುತ್ತಿಲ್ಲ. ಯಾವುದೇ ಕಾರ್ಯಕರ್ತರು ಬಂದರೂ ಅವರ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸುತ್ತಿರುವುದಾಗಿ ಹೇಳಿದರು.
ಈ ಉಪಚುನಾವಣೆ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಮುಂದಿನ ಲೋಕಸಭಾ ಚುನಾವಣೆ ಕಾರ್ಯಕರ್ತರ ಮತ್ತು ಜನರ ವಿರುದ್ಧವಿರುವುದಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ