ಬೆಂಗಳೂರು, ಅ.15- ಕಾಂಗ್ರೆಸ್ ಪಾಲಿಗೆ ಉಳಿದಿರುವ ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ಗೆ ಶಿವಮೊಗ್ಗ, ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.
ಬಾಕಿ ಉಳಿದ ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಜಮಖಂಡಿಗೆ ಈಗಾಗಲೇ ಆನಂದ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಸುತ್ತಿನ ಸಭೆಗಳನ್ನು ನಡೆಸಿದರೂ ಅದು ಯಶಸ್ವಿಯಾಗಿಲ್ಲ.
ಸ್ಥಳೀಯವಾಗಿ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ಪ್ರಸಾದ್, ಇತರೆ ಮುಖಂಡರಾದ ದೇವೇಂದ್ರಪ್ಪ, ನೆಟ್ಕಲ್ಲಪ್ಪ ಸೇರಿದಂತೆ ಹಲವಾರು ಮಂದಿಯ ಹೆಸರು ಚಾಲ್ತಿಯಲ್ಲಿದ್ದವು. ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ವಿ.ಎಸ್.ಉಗ್ರಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆ ಸೂಚನೆ ನೀಡಿದ್ದರು.
ಉಗ್ರಪ್ಪ ಅವರಿಗಿಂತಲೂ ವೆಂಕಟೇಶ್ಪ್ರಸಾದ್ ಅವರಿಗೆ ಬೆಂಬಲ ನೀಡುವುದು ಸೂಕ್ತ ಎಂದು ಜಿಲ್ಲಾ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಗೊಂದಲ ಉಂಟಾಯಿತು.
ಬಳ್ಳಾರಿ ಕೇಸರಿ ಕೋಟೆಗೆ ಕಾಂಗ್ರೆಸ್ ಲಗ್ಗೆ:
ಬಿಜೆಪಿಯ ಭದ್ರಕೋಟೆಯಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮರುವಶ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಗಣಿ ಧಣಿಗಳಾದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಬಹಿರಂಗ ಸವಾಲು ಹಾಕಿರುವುದು ಕಾಂಗ್ರೆಸ್ ಪಾಳಯವನ್ನು ಕೆರಳಿಸಿದೆ.
ಹೀಗಾಗಿ ಇಡೀ ಕಾಂಗ್ರೆಸ್ ಒಟ್ಟಾಗಿ ಗಣಿ ಧಣಿಗಳ ಕೋಟೆಯನ್ನು ಛಿದ್ರಗೊಳಿಸಲು ಸರ್ಕಸ್ ಆರಂಭವಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಬಳ್ಳಾರಿಯ ಜನ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.
ನಾಯಕ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಸಚಿವ ರಮೇಶ್ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಬಳ್ಳಾರಿ ಅಖಾಡಕ್ಕಿಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ನಿಂತು ಕೆಲಸ ಮಾಡಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಸಿದ್ದರಾಮಯ್ಯ ಅವರು ಈಗಾಗಲೇ ಜಿಲ್ಲೆಯ ಶಾಸಕರಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ಗಣಿ ಧಣಿಗಳ ಸವಾಲಿಗೆ ತಿರುಗೇಟು ನೀಡದೇ ಹೋದರೆ ರಾಜಕೀಯವಾಗಿ ವರ್ಚಸ್ಸು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಕಾಂಗ್ರೆಸ್ನ ಹಿರಿಯ ನಾಯಕರಲ್ಲಿದೆ. ಹೀಗಾಗಿ ಒಳ ಜಗಳಗಳನ್ನು ಮರೆತು ಬಳ್ಳಾರಿಯಲ್ಲಿ ಮರು ಹಿಡಿತ ಸಾಧಿಸಲು ರಣವ್ಯೂಹ ರಚಿಸಲಾಗುತ್ತಿದೆ.
ಜಮಖಂಡಿ ಕಾಂಗ್ರೆಸ್ ಪಾಲಿಗೆ ಸುಲಭದ ತುತ್ತು ಎಂದು ಭಾವಿಸಲಾಗಿದ್ದರೂ ಬಿಜೆಪಿ ಪಾಳಯದ ತಯಾರಿಗಳು ಕಾಂಗ್ರೆಸ್ಗೆ ಎಚ್ಚರಿಕೆಯ ಸಂದೇಶಗಳಾಗಿವೆ. ಈವರೆಗೂ ಜಮಖಂಡಿಯಲ್ಲಿ ಭಿನ್ನಸ್ವರಗಳು ಕೇಳಿಬಂದಿರಲಿಲ್ಲ. ಆದರೆ, ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಕೆಲವು ಸ್ಥಳೀಯ ನಾಯಕರು ಬಂಡಾಯವೆದ್ದಿದ್ದಾರೆ. ಹೀಗಾಗಿ ಅವರನ್ನೆಲ್ಲಾ ಸಮಾಧಾನಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆಯೇ ಜಮಖಂಡಿಗೆ ತೆರಳುತ್ತಿದ್ದಾರೆ.
ನಾಳೆ 11 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ನಾಮಪತ್ರ ಸಲ್ಲಿಸಲಿದ್ದು, ಅದರಲ್ಲಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಮತ್ತಿತರರು ಭಾಗವಹಿಸಲಿದ್ದಾರೆ. ನಂತರ ಜಮಖಂಡಿಯಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ನಾಯಕರು ಭಾಷಣ ಮಾಡಲಿದ್ದಾರೆ.