ಎರಡೂ ಪಕ್ಷದ ನಾಯಕರು ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಅ.15- ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ತೀರ್ಮಾನಿಸಿ ಜೆಡಿಎಸ್‍ಗೆ ಕ್ಷೇತ್ರ ಬಿಟ್ಟು ಕೊಡಲು ತೀರ್ಮಾನಿಸಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಎರಡೂ ಪಕ್ಷದ ನಾಯಕರು ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರ ಗೆಲ್ಲಲು ನಮ್ಮದೇ ಆದ ಕಾರ್ಯತಂತ್ರ ಹೂಡಿದ್ದೇವೆ. ಮೂರು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಪ್ರಯತ್ನ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಕಳೆದ ಬಾರಿ ನಾಲ್ಕೂವರೆ ಲಕ್ಷ ಮತ ಪಡೆದಿದ್ದೇವೆ. ಚುನಾವಣೆಯಲ್ಲಿ ಅಭ್ಯರ್ಥಿಯ ಪಾತ್ರ ಮುಖ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಗುರಿ. ಆದ್ದರಿಂದ ಈ ಬಾರಿ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದೇವೆ ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡು ಕಡೆ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಈ ಮೊದಲೇ ತಿಳಿಸಿದ್ದೆವು. ಶಿವಮೊಗ್ಗದಲ್ಲಿ ನಮಗೆ ಹೆಚ್ಚು ಮತಗಳು ಬಂದಿದ್ದರೂ ಅಲ್ಲಿ ನಾವು ಜೆಡಿಎಸ್ ಅನ್ನು ಬೆಂಬಲಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸಲಿವೆ ಎಂದು ತಿಳಿಸಿದರು
ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರದ ವರೆಗೆ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಅನವಶ್ಯಕವಾಗಿ ಬಿಜೆಪಿ ಉಪಚುನಾವಣೆ ತಂದೊಡ್ಡಿದೆ. ನಾವು ನಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದೇವೆ. ಎಲ್ಲಾ 5 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ನಾವು ಬಿಜೆಪಿಯನ್ನು ಕಿತ್ತೊಗೆಯಬೇಕಿದೆ. ಪ್ರಧಾನಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದು ಎಂದು ಹೇಳಿದ ಅವರು, ಶಿವಮೊಗ್ಗದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಮಹತ್ವದ ಪಾತ್ರ ವಹಿಸುತ್ತದೆ. ಒಂದೊಂದು ಕ್ಷೇತ್ರಕ್ಕೆ ಬೇರೆ ಬೇರೆ ಕಾರ್ಯತಂತ್ರ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿಯನ್ನು ತೆಗೆಯಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ. ಕಿಮ್ಮನೆ ರತ್ನಾಕರ್ ಹಾಗೂ ಕಾಗೋಡು ತಿಮ್ಮಪ್ಪ ಸೇರಿ ಹಲವರು ನಾಮಪತ್ರ ಸಲ್ಲಿಸಲು ಹೋಗಲಿದ್ದಾರೆ. ಜಮಖಂಡಿಗೆ ಪರಮೇಶ್ವರ್, ಬಳ್ಳಾರಿಗೆ ಡಿಕೆ ಶಿವಕುಮಾರ್, ರಾಮನಗರಕ್ಕೆ ಡಿಕೆ ಸುರೇಶ್, ಶಿವಮೊಗ್ಗಕ್ಕೆ ದೇಶಪಾಂಡೆಯವರನ್ನು ಉಸ್ತುವಾರಿಗಳಾಗಿ ನೇಮಿಸಿದ್ದೇವೆ ಎಂದು ವಿವರಿಸಿದರು.

ಹಿಂದೆ ನಾವು ಜೆಡಿಎಸ್ ವಿರುದ್ಧವೂ ಹೋರಾಡಿದ್ದೇವೆ. ಹೀಗಾಗಿ ಕೆಲವು ಕಡೆ ಭಿನ್ನಾಭಿಪ್ರಾಯ ಇರುತ್ತದೆ. ಅದಕ್ಕೆ ನಾವು ಏನೂ ಮಾಡಲಾಗುವುದಿಲ್ಲ ಎಂದು ಸಿ.ಎಂ.ಲಿಂಗಪ್ಪ ಅವರ ವಿರೋಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳ ಬಗ್ಗೆ ಎಐಸಿಸಿ ತೀರ್ಮಾನವೇ ಅಂತಿಮ. ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲವೂ ದೆಹಲಿಯಲ್ಲಿ ತೀರ್ಮಾನವಾಗಬೇಕು. ನಾಳೆ ನಾಮಪತ್ರ ಸಲ್ಲಿಸುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ