ಬೆಂಗಳೂರು, ಅ.15- ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವಿಂಟ್ ಹಾಗೂ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಗಳ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ದಾಳಿ ನಡೆಸಿ, ದಾಖಲೆಗಳನ್ನು ಕೊಂಡೊಯ್ದಿರುವುದು. ಖಂಡನೀಯ ಎಂದು ಅಸಮ್ಮತಿಗಾಗಿ ಐಕ್ಯ ವೇದಿಕೆ ತೀವ್ರವಾಗಿ ಖಂಡಿಸಿದೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಕ್ರಮ್ ಸಂಸ್ಥೆಯ ಮ್ಯಾಥ್ಯೂ ಫಿಲಿಪ್, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯದಿಂದ ಯಾವುದೇ ವಾರಂಟ್ ಪಡೆಯದೆ ದಾಳಿ ನಡೆಸಿ, ದಾಖಲೆ ವಶಪಡಿಸಿಕೊಳ್ಳುವ ಮೂಲಕ ಸಂವಿಧಾನ ನೀಡಿದ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ.
ದಾಳಿಯ ವೇಳೆ ಸುಪ್ರೀಂಕೋರ್ಟ್ನ ಮಾರ್ಗದರ್ಶಿ ಸೂತ್ರ ಮತ್ತು ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ. ಅನ್ಯಾಯವನ್ನು ಬಹಿರಂಗಪಡಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಸಮಾಜದಲ್ಲಿ ದಮನಿತರ ಪರವಾಗಿ ಧ್ವನಿ ಎತ್ತುವವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ಇಂತಹ ದಾಳಿಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದ ಅಸಮ್ಮತಿಗಾಗಿ ಐಕ್ಯಮತ ವೇದಿಕೆ ಸ್ಥಾಪಿಸಲಾಗಿದೆ. ಈ ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರು ಇದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರೀನ್ ಪೀಸ್ನ ನಂದಿನಿ, ವಕೀಲ ಅಖಿಲ ವಿದ್ಯಾಸಂದ್ರ, ಕರ್ನಾಟಕ ಜನಾರೋಗ್ಯ ಚಳವಳಿಯ ವಿಜಯ ಕುಮಾರ್ ಸೀತಪ್ಪ, ಸ್ವರಾಜ್ ಅಭಿಯಾನದ ಕೆ.ಪಿ.ಸಿಂಗ್, ಅರುಣಾ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.