ಇಸ್ರೇಲ್ ಕೃಷಿ ಮಾದರಿ ಪದ್ಧತಿ ಮುಂದಿನ ತಿಂಗಳಿನಿಂದ ಜಾರಿ

ಬೆಂಗಳೂರು, ಅ.15- ಬಹುನಿರೀಕ್ಷಿತ ಇಸ್ರೇಲ್ ಕೃಷಿ ಮಾದರಿ ಪದ್ಧತಿಯನ್ನು ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಜಾರಿಗೊಳಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಈಗಾಗಲೇ ನಮ್ಮ ಇಲಾಖೆ ಎಲ್ಲಾ ರೀತಿಯ ರೂಪುರೇಷೆಗಳೊಂದಿಗೆ ವರದಿಗಳನ್ನು ಸಿದ್ದಪಡಿಸಿಕೊಂಡಿದೆ. ಇಂದು ಸಿಎಂ ಜತೆ ಸಭೆ ನಡೆದು ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ, ಮುಖ್ಯಮಂತ್ರಿಗಳಿಗೆ ಬೇರೆ ಕಾರ್ಯದೊತ್ತಡ ಇದ್ದುದ್ದರಿಂದ ಸಭೆ ರದ್ದಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅವರಿಂದ ಸಮಯ ಪಡೆದು ವರದಿ ಮಂಡಿಸಲಾಗುವುದು ಎಂದರು.

ಸಾಮೂಹಿಕ ಕೃಷಿ ಪದ್ಧತಿ
ಇಸ್ರೇಲ್ ಮಾದರಿ ಅತ್ಯಂತ ಪರಿಣಾಮಕಾರಿ ಮತ್ತು ಲಾಭದಾಯಕ ಕೃಷಿ ಎಂಬ ಪ್ರಚಲಿತ ಪಡೆದಿದೆ. ಅದರ ಪೈಕಿ ಕರ್ನಾಟಕ ಸರ್ಕಾರ ನಾಲ್ಕು ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿದೆ. ಸುಮಾರು 250ರಿಂದ 300 ರೈತರನ್ನು ಗುಂಪುಗೂಡಿಸಿ ಅವರ ಅಷ್ಟೂ ಜಮೀನಿನಲ್ಲಿ ಒಂದೇ ರೀತಿಯ ಬೆಳೆ ಬೆಳೆಯವ ಪ್ರಸ್ತಾವನೆ ಇದೆ. ಇದರಿಂದ ಕೀಟ ಬಾಧೆ ಮತ್ತು ಪೆÇೀಷಕಾಂಶದ ನಿರ್ವಹಣೆ, ಮಾರುಕಟ್ಟೆ ವ್ಯವಸ್ಥೆ, ಕೂಲಿಕಾರ್ಮಿಕರ ಸಮಸ್ಯೆ ಎಲ್ಲವೂ ಬಗೆಹರಿಯಲಿವೆ. ಯಾವ್ಯಾವ ಭಾಗದಲ್ಲಿ ಯಾವ ರೀತಿಯ ಬೆಳೆಗಳನ್ನು ಗುರುತಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗುವುದರಿಂದ ಬೆಲೆಯಲ್ಲಿ ಏರುಪೇರು ತಡೆಗಟ್ಟಬುಹುದು ಎಂದು ತಿಳಿಸಿದರು.

ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದ ಅಧೀನದಲ್ಲಿರುವ ಕೃಷಿ ಫಾರಂಗಳಲ್ಲಿ ಇಸ್ರೇಲ್ ಮಾದರಿಯ ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಸಲಕರಣೆಗಳನ್ನು ಅಳವಡಿಸಲಾಗುವುದು. ಜತೆಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶನ ಮಾಡಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಅಲ್ಲಿ ನೀರಿನ ಮಿತವ್ಯಯದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುವುದು. ಬಯಲು ಪ್ರದೇಶದಲ್ಲಿ ವೈಜ್ಞಾನಿಕ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಂದು ಬಿಡುಗಡೆಯಾದ ಪ್ಲಾಂಟಿಕ್ ಮೊಬೈಲ್ ಅಪ್ಲಿಕೇಷನ್ ನಂತಹ ವೈಜ್ಞಾನಿಕ ಪದ್ಧತಿಯನ್ನು ಬಳಸಿಕೊಂಡು ರೈತರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದಾಯಕವಾಗುವ ಬೆಳೆಗಳನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ. ಇಸ್ರೇಲ್ ಮಾದರಿ ಮುಂದಿನ ತಿಂಗಳಿನಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ