ಜೈನ ಸಮುದಾಯದ ಸದಸ್ಯರ ಪ್ರತಿಭಟನೆ

ಬೆಂಗಳೂರು, ಅ.15- ಅಭಿವೃದ್ಧಿ ಹೆಸರಿನಲ್ಲಿ ಜಾರ್ಖಂಡ್ ಸರ್ಕಾರವು ಅಲ್ಲಿನ ಸಮೇತ ಶಿಖರ್ಜಿ ತೀರ್ಥಕ್ಷೇತ್ರದ ಜಾಗವನ್ನು ಅತಿಕ್ರಮಣ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜೈನ ಸಮುದಾಯದ ಸದಸ್ಯರು ನಗರದ ಪುರಭವನದ ಎದುರು ಇಂದು ಪ್ರತಿಭಟನೆ ನಡೆಸಿದರು.

ಹರಿಹಂತ ಪ್ರಾಣಿದಯಾ ಕಲ್ಯಾಣ ಸಂಘ ಮತ್ತು ಕರ್ನಾಟಕ ರಾಜ್ಯ ಜೈನ್ ಧರ್ಮಾವಲಂಬಿ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜೈನ್ ಸಮುದಾಯದ ಮುಖಂಡ ದೇವಕುಮಾರ್ ಮಾತನಾಡಿ, ಸಮೇತ ಶಿಖರ್ಜಿ ತೀರ್ಥ ಪುಣ್ಯ ಕ್ಷೇತ್ರವು ಜೈನ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಲ್ಲಿ 20 ತೀರ್ಥಂಕರರು ನಿರ್ವಾಣ ಹೊಂದಿದ್ದಾರೆ. ಈ ಪವಿತ್ರ ಕ್ಷೇತ್ರವನ್ನು ಜನರು ಆತ್ಮೋದ್ಧಾರಕ್ಕಾಗಿ ಪ್ರವಾಸ ಮಾಡಿ ಪುಣ್ಯವನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದಿರುವ ಧಾರ್ಮಿಕ ನಂಬಿಕೆ. ಆದರೆ, ಜಾರ್ಖಂಡ್ ಸರ್ಕಾರವು ಅತಿಕ್ರಮಣ ಪ್ರವೇಶ ಮಾಡಿ ಸುತ್ತಲೂ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅನೇಕ ತೆರವಾದ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ ಎಂದು ಆರೋಪಿಸಿದರು.

ಯೋಜನೆ ಕೈಬಿಡಬೇಕೆಂದು ಈಗಾಗಲೇ ದೇಶದೆಲ್ಲೆಡೆ, ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಪರಂಪರೆ ಪುಣ್ಯ ಕ್ಷೇತ್ರಕ್ಕೆ ಧಕ್ಕೆ ಮಾಡುವುದು ಸರಿಯಲ್ಲ. ಹೊಸ ಕಟ್ಟಡ ನಿರ್ಮಾಣ ದಿಂದಾಗಿ, ಅನೈತಿಕ ಚಟುವಟಿಕೆಗಳು ನಡೆಯಲಿವೆ ಎಂದು ದೂರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ