ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಸ್ಕøತಿ ಸಮಾವೇಶ

ಬೆಂಗಳೂರು, ಅ.14- ಇತ್ತೀಚಿನ ದಿನಗಳಲ್ಲಿ ಉಳ್ಳವರಿಗೆ ಒಂದು ಶಿಕ್ಷಣ ಬಡವರಿಗೆ ಒಂದು ಶಿಕ್ಷಣದ ವ್ಯವಸ್ಥೆ ಉಂಟಾಗಿದ್ದು, ಇದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬುದ್ದ -ಬಸವ-ಗಾಂಧಿ ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಸ್ಕøತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯಾಪಾರೀಕರಣದ ಸ್ಥಿತಿಗೆ ಬಂದು ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವಂತಹ ಪರಿಸ್ಥಿತಿ ಇದೆ. ಇಂಥ ವಾತಾವರಣದಲ್ಲಿ ಬೆಳೆದ ಮಕ್ಕಳು ಸೃಜನಶೀಲ, ಪ್ರಜ್ಞಾವಂತರಾಗಲು ಸಾಧ್ಯವಿಲ್ಲ. ಇಂತಹ ಶಿಕ್ಷಣ ಕಲ್ಲು ಕುಂಡದಲ್ಲಿ ಸಸಿ ಬೆಳೆಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾಷೆ ಯಾವತ್ತಿಗೂ ಭೂಮಿಯಾಗಿರಬೇಕೆ ಹೊರತು ಕಲ್ಲಾಗಿರಬಾರದು. ಬ್ಯಾಂಕಿಂಗ್, ರೈಲ್ವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕಷ್ಟವಾಗಿದೆ. ಹಾಗಾಗಿ ಅವರಿಗೆ ತಿಳಿದಿರುವ ಪ್ರಾದೇಶಿಕ ಭಾಷೆಗಳಲ್ಲೆ ಪರೀಕ್ಷೆಗಳನ್ನು ನಡೆಸಬೇಕೆಂದು ಆಗ್ರಹಿಸಿದರು.

ಡಾ.ವರದಾ ಶ್ರೀನಿವಾಸ್ ಅವರು ಎಲೆ ಮರೆ ಕಾಯಿಯಂತೆ ಬೆಳೆದಿದ್ದಾರೆ. ಇವರನ್ನು ಗುರುತಿಸಿ ಸಮಾವೇಶದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಇವರು ಸಾಹಿತ್ಯ, ಸಂಶೋಧನೆ,ಲಲಿತ ಪ್ರಬಂಧ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇವರು ಡಾ.ಹಂಪನಾ ಅವರ ಮಾರ್ಗದರ್ಶದನಲ್ಲಿ ಪಂಜೆ ಮಂಗೇಶರ ರಾಯರ ಬದುಕು ಬರಹ ಕುರಿತು ಮಂಡಿಸಿದ ಮಹಾಪ್ರಬಂಧ ಬೆಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಡಾಕ್ಟರೇಟ್ ಎಂಬುದು ಮಾರಾಟದ ವಸ್ತುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದರಿಂದ 10ನೇ ತರಗತಿವರೆಗೆ ಕನ್ನಡವನ್ನು ಕಡ್ಡಾಯವಾಗಿ , ಉಚಿತವಾಗಿ ಸಮಾನ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದ ಅವರು, ಖಾಸಗಿ ಶಾಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಕನ್ನಡ ಸಾಹಿತ್ಯ ರಚನೆ ಎಷ್ಟೇ ಸಮೃದ್ಧವಾಗಿದ್ದರೂ ಅದನ್ನು ಓದುವ ಮಕ್ಕಳೇ ಇರುವುದಿಲ್ಲ ಹಾಗಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.

ಕೆಂಪೇಗೌಡ ಪ್ರಶಸ್ತಿ ಪುರಸ್ಕøತರಾದ ಡಾ.ಅಂಬುಜಾಕ್ಷಿ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪುರುಷರಿಗೆ ಅಕ್ರಮ ಸಂಬಂಧ ಹೊಂದಲು ಲೈಸೆನ್ಸ್ ನೀಡಿದಂತಾಗಿದೆ. ಇದು ವ್ಯಭಿಚಾರದಲ್ಲಿ ತೊಡಗಲು ಎಲ್ಲರಿಗೂ ನೀಡಿದ ಅನುಮತಿಯಂತಿದೆ. ಇದರಿಂದ ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಶತ್ರುಗಳಾಗುತ್ತಾರೆ. ಸಂಪ್ರದಾಯ ಮನಸ್ಸುಗಳಿಗೆ ಮುಜುಗರು ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಡಾ.ವರದಾ ಶ್ರೀನಿವಾಸ್ ಅವರ ಕನಸು-ನನಸು ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಹಿರಿಯ ಸಾಹಿತಿ ವರದಾಶ್ರೀನಿವಾಸ್, ಖ್ಯಾತ ವಕೀಲ ನಂಜಂಪ್ಪ ಕಾಳೇಗೌಡ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ