ಇಂದಿನ ಮಾಧ್ಯಮಗಳ ಸ್ಥಿತಿಗತಿ ನೋಡಿದರೆ ಆತಂಕ ಉಂಟಾಗುತ್ತದೆ: ಎಚ್.ಎಂ.ರೇವಣ್ಣ

ಬೆಂಗಳೂರು, ಅ.13-ಮಾಧ್ಯಮ ಕ್ಷೇತ್ರ ಮಲಿನವಾದರೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಮಲಿನಗೊಳ್ಳುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಎಚ್ಚರಿಕೆ ನೀಡಿದರು.

ನಗರದ ದೇವರಾಜ ಅರಸು ಭವನದಲ್ಲಿಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ, ಪತ್ರಕರ್ತ ಎಂ.ಸಿದ್ದರಾಜು ಅವರ ಸಾಧನೆ ಮತ್ತು ಸಂಭ್ರಮ ಕುರಿತ ಸಿದ್ಧಹಸ್ತ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ಮಾಧ್ಯಮಗಳ ಸ್ಥಿತಿಗತಿಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಕೆಲವು ಚಾನಲ್‍ಗಳಲ್ಲಿ ಅವರೇ ಕೆಲಸ ಮಾಡಿಕೊಂಡು ಅವರೇ ಸಂಪಾದನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ವಾತಾವರಣ ಬದಲಾಗದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮದಲ್ಲಿ ಕೆಲಸ ಮಾಡುವವರು ತಾವು ಎಲ್ಲರಿಗಿಂತ ಮಿಗಿಲು ಎಂಬ ಭ್ರಮೆಯಲ್ಲಿರಬಾರದು. 20 ವರ್ಷದ ಯುವಕ ಮಾಜಿ ಪ್ರಧಾನಿ ದೇವೇಗೌಡರನ್ನು ಮಿಸ್ಟರ್ ದೇವೇಗೌಡ ಎಂದು ಹೆಸರಿಡಿದು ಮಾತನಾಡಿಸುವಂತಹ ಉದ್ಧಟತನದ ವಾತಾವರಣವಿದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದು ಸರಿಯಾಗಿದ್ದರೆ ಸಮಾಜಕ್ಕೆ ಒಳ್ಳೆಯದು , ಅಲ್ಲಿಯೂ ಮಲಿನ ವಾತಾವರಣ ನಿರ್ಮಾಣವಾದರೆ ರಾಷ್ಟ್ರ ಮತ್ತು ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮಾಜ ಕಟ್ಟುವ ಈ ವೃತ್ತಿಯನ್ನು ಅತ್ಯಂತ ಗೌರವಾದರಗಳಿಂದ ನಿರ್ವಹಣೆ ಮಾಡಬೇಕು.

ಮಾಧ್ಯಮಗಳಿಗೆ ಮೊದಲು ಕೈಗೆ ಸಿಗುವುದೇ ರಾಜಕಾರಣಿಗಳು. ಎಲ್ಲಾ ಕ್ಷೇತ್ರದಲ್ಲೂ ಒಳ್ಳೆಯವರು, ಕೆಟ್ಟವರು ಇದ್ದಂತೆ ರಾಜಕಾರಣಿಗಳಲ್ಲೂ ಇದ್ದಾರೆ. ಅದನ್ನು ವಿಶ್ಲೇಷಣಾತ್ಮಕವಾಗಿ ನೋಡಬೇಕು ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಜು ಅವರು ಬಹಳಷ್ಟು ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಆದ ಬಹಳಷ್ಟು ಒಳ್ಳೆಯ ಕೆಲಸಗಳಲ್ಲಿ ಸಿದ್ದರಾಜು ಅವರ ಸಲಹೆಗಳಿವೆ. 37 ವರ್ಷ ಸುದೀರ್ಘ ಜೀವನದಲ್ಲಿ ಸಿದ್ದರಾಜು ಅವರು ಎಂದಿಗೂ ರಾಜೀ ಮಾಡಿಕೊಂಡವರಲ್ಲ. ಸತ್ಯ, ಸುಳ್ಳುಗಳ ಜೊತೆ ನಿಷ್ಠೂರವಾಗಿ ವರ್ತಿಸಿದವರು. ಅವರು ಕೆಲಸ ಮಾಡಿದ ಪಿಟಿಐ ಸಂಸ್ಥೆ ಇಂದಿಗೂ ಸತ್ಯಾಸತ್ಯತೆಯ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಮಾತನಾಡಿ, ಕಾಡಿನಲ್ಲಿ ಯಾವುದೇ ಆಶ್ರಯವಿಲ್ಲದೆ ಬೆಳೆದ ಮರದಂತೆ ಸಿದ್ದರಾಜು ಬೆಳೆದಿದ್ದಾರೆ. ಅತ್ಯಂತ ಹಿಂದುಳಿದ ಬಡ ಕುಟುಂಬದಿಂದ ಬಂದಿದ್ದಾರೆ. ಮಡಿವಾಳ ಸಮುದಾಯದಿಂದ ಬಂದು ಬಹಳ ಎತ್ತರದ ಸಾಧನೆ ಮಾಡಿದ ಅವರು, ಉದ್ಯೋಗದಲ್ಲಿ ಪಾವಿತ್ರ್ಯತೆ ಕಾಪಾಡಿಕೊಂಡವರು. ಅವರು ಪಾಲಿಸಿದ ಉತ್ತಮ ವೃತ್ತಿ ಧರ್ಮದಿಂದಾಗಿ ಅವರಿಗೆ ಒಳ್ಳೆಯ ಸ್ಥಾನಗಳು ದಕ್ಕಿವೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡಿಯೂ ಯಾರ ಶತ್ರುತ್ವವನ್ನು ಕಟ್ಟಿಕೊಳ್ಳದ ಉತ್ತಮ ಪತ್ರಕರ್ತ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಿದ್ದರಾಜು ಮತ್ತು ಅವರ ಪತ್ನಿ ಶ್ರೇಯಾ ಅವರನ್ನು ಮಡಿಲು ತುಂಬಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದರಾಜು ಅವರು ನಡೆದು ಬಂದ ಹಾದಿ ಮತ್ತು ಸಾಧನೆಗಳ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು.
ಸಿದ್ಧ ಹಸ್ತ ಪುಸ್ತಕದ ಸಂಪಾದಕರಾದ ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತರಾದ ಜಿ.ಡಿ.ಗೋಪಾಲ್, ಎ.ಕೆ.ಸತ್ಯ, ಡಾ.ಮೈ.ಸಿ.ಪಾಟೀಲ್, ಜಯಾಸಿದ್ದರಾಜ್, ಕೆಂಪರಾಜು, ಪಲ್ಲವ ವೆಂಕಟೇಶ್, ನಂಜುಂಡಪ್ಪ, ಎಂ.ಎಸ್.ಮಣಿ, ಮಂಜುನಾಥ್ ಬೊಮ್ಮನಕಟ್ಟಿ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ