ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮುಖ್ಯ

ಬೆಂಗಳೂರು, ಅ.13- ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರದೇ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳನ್ನು ಸಂರಕ್ಷಿಸಿಕೊಂಡು ಆರೋಗ್ಯವಂತರಾಗಿರಬೇಕೆಂದು ಮಿಂಟೋ ಕಣ್ಣಿನ ಆಸ್ಪತ್ರೆಯ ಪ್ರಭಾರ ನಿರ್ದೇಶಕಿ ಡಾ. ಸುಜಾತ ರಾಥೋಡ್ ಕರೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ದೃಷ್ಟಿ ದಿನಾಚರಣೆಯ ಅಂಗವಾಗಿ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೀಪಾವಳಿ ಹಬ್ಬ ಬಂದಾಗ ಮಾತ್ರ ಕಣ್ಣಿನ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಲು ಪ್ರಾರಂಭಿಸುತ್ತೇವೆ. ಇದು ಉತ್ತಮ ಬೆಳವಣಿಗೆಯಲ್ಲ. ದಿನನಿತ್ಯ ಆರೋಗ್ಯ ತಪಾಸಣೆಯಂತೆ ಕಣ್ಣಿನ ತಪಾಸಣೆಯನ್ನು ಮಾಡಿಸುವ ದಿಕ್ಕಿನತ್ತ ಎಲ್ಲರೂ ಆಲೋಚನೆ ನಡೆಸಬೇಕೆಂದರು.

ಕಣ್ಣಿನ ದಾನದ ಬಗ್ಗೆ ಹಲವಾರು ಊಹ ಪೆÇೀಹಗಳಿಗೆ ಕಿವಿಗೊಡದೆ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರಿಗೆ ಬೆಳಕಾಗಬೇಕೆಂದು ತಿಳಿಸಿದರು.

ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಯಾವಾಗಲೂ ಕ್ಲಿಷ್ಟಕರ ಸನ್ನಿವೇಶದಲ್ಲಿ ಹಾಗೂ ಒತ್ತಡದಿಂದ ಕಾರ್ಯ ನಿರ್ವಹಿಸುವ ಬಹುತೇಕ ಸಂದರ್ಭಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಪರಿಣಾಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದ್ದು, ಪತ್ರಕರ್ತರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡು ಕಾರ್ಯಪೃತ್ತರಾಗಬೇಕೆಂದು ಮನವಿ ಮಾಡಿದರು. ಶ್ರೇಷ್ಠ ದಾನಗಳಲ್ಲಿ ಕಣ್ಣಿನ ದಾನವೂ ಒಂದಾಗಿದ್ದು, ಕಣ್ಣಿನ ದಾನದ ಬಗ್ಗೆ ಅರಿವು ಮೂಡಿಸಿಕೊಂಡು ಇತರರಿಗೂ ಮಾಹಿತಿ ನೀಡುವ ಮೂಲಕ ದಾನದ ಶ್ರೇಷ್ಠತೆಯನ್ನು ಸಾರಬೇಕೆಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ ಗಾಂಧಿ ಮಾತನಾಡಿ, ಡಾ.ರಾಜ್‍ಕುಮಾರ್ ಅವರು ನೇತ್ರ ದಾನದ ಪಾವಿತ್ರ್ಯತೆಯ ಬಗ್ಗೆ ಆಡಿದ ಮಾತುಗಳು ಅನೇಕರನ್ನು ಆಕರ್ಷಿಸಿತು. ಇದರಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿ ನಾನು ಕೂಡ ಪ್ರೇರೇಪಿತನಾಗಿ ನೇತ್ರ ದಾನಕ್ಕೆ ನೋಂದಾಯಿಸಿದ್ದೇನೆ ಎಂದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಆರ್. ರವೀಶ್, ನವದೆಹಲಿ ರಾಷ್ಟ್ರೀಯ ನೇತ್ರ ಸಂಘದ ಅಧ್ಯಕ್ಷ ಎಂ. ವೆಂಕಟೇಶ್ , ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ದೇವರಾಜ್, ಉಪಾಧ್ಯಕ್ಷರಾದ ಎ. ವಿಜಯಕುಮಾರ್, ಕೆ.ಸಿ. ವೇದಮೂರ್ತಿ. ಕಾರ್ಯದರ್ಶಿ ಎನ್.ಪಿ. ಮುನಿರಾಜು, ನರೇಂದ್ರ ಪಾರೇಕಟ್, ಕೆ.ಎಂ. ಜಕ್ರೀಯಾ, ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ