ಬೆಂಗಳೂರು, ಅ.12-ಕೋಳಿ ಸಾಕಾಣಿಕೆಯನ್ನು ಉದ್ಯಮ ಎಂದು ಪರಿಗಣಿಸದೆ ಕೃಷಿ ಚಟುವಟಿಕೆ ಎಂದು ಪರಿಗಣಿಸುವ ಅಗತ್ಯ ಇದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ನಾಡಗೌಡ ಹೇಳಿದರು.
ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಪರಿಷತ್ನಲ್ಲಿ ಪಶುಪಾಲನಾ ಇಲಾಖೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಲ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಮೊಟ್ಟೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಉಪ ಕಸುಬುಗಳನ್ನು ಅವಲಂಬಿಸಿದ ಯಾವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಲ್ಲದೆ, ಬದುಕುವ ಸ್ಥೈರ್ಯ ತುಂಬುತ್ತವೆ ಎಂದು ಹೇಳಿದರು.
ಕೋಳಿ ಸಾಕಾಣಿಕೆಯನ್ನು ಉದ್ಯಮ ಎಂದು ಪರಿಗಣಿಸಿರುವುದರಿಂದ ಬ್ಯಾಂಕ್ಗಳು ಶೇ.17ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಕೃಷಿ ಎಂದು ಪರಿಗಣಿಸುವುದಾದರೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೂ ಸಾಲ ನೀಡಲು ಅವಕಾಶವಿದೆ. ಕೃಷಿ ಗ್ಯಾಬ್ಲಿಂಗ್ (ಜೂಜು) ಇದ್ದಹಾಗೆ. ಕೆಲವು ಲಾಭ ಬಂದರೆ, ಕೆಲವೊಮ್ಮೆ ನಷ್ಟ ಸಂಭವಿಸುತ್ತದೆ, ಬೆಲೆ ಏರಿಕೆ, ಪ್ರಕೃತಿ ವಿಕೋಪ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಕೃಷಿ ಆದಾಯ ನಿಶ್ಚಿತವಾಗಿಲ್ಲ. ಆದರೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ, ಕುರಿ ಸೇರಿದಂತೆ ಜಾನುವಾರುಗಳ ಸಾಕಾಣಿಕೆಯ ಉಪಕಸುಬುಗಳು ನಿಶ್ಚಿತ ಆದಾಯವನ್ನು ತಂದುಕೊಡುತ್ತವೆ. ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಅವರು ತಿಳಿಸಿದರು.
ಮನುಷ್ಯ ಆರೋಗ್ಯದಿಂದಿರಲು ವರ್ಷಕ್ಕೆ 180 ಮೊಟ್ಟೆ ತಿನ್ನಬೇಕು. ಆದರೆ ಈಗಿನ ಲೆಕ್ಕಾಚಾರ ಬಗ್ಗೆ 69 ಮೊಟ್ಟೆಗಳನ್ನು ಮಾತ್ರ ತಿನ್ನುತ್ತಿದ್ದಾರೆ. ವಿಶ್ವದಲ್ಲಿ ಭಾರತ ಮೊಟ್ಟೆ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನದಲ್ಲಿದೆ. ನಮಗೆ ಅಗತ್ಯವಾಗಿರುವಷ್ಟು ಮೊಟ್ಟೆ, ಮಾಂಸಗಳ ಉತ್ಪಾದನೆಗೆ ದೇಶಿಯ ಪಶುಸಂಗೋಪನೆಯನ್ನು ಇನ್ನಷ್ಟು ಪೆÇ್ರೀ ಎಂದು ಅವರು ಕರೆ ನೀಡಿದರು.
ಪಶು ಸಂಗೋಪನಾ ಇಲಾಖೆ ಅಧೀನದಲ್ಲಿರುವ ಕೋಳಿ ಫಾರಂಗಳನ್ನು ಕುಕ್ಕುಟ ಮಹಾಮಂಡಳ ವ್ಯಾಪ್ತಿಗೆ ನೀಡುವಂತೆ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಮೊದಲು ಮಹಾಮಂಡಳ ವ್ಯಾಪ್ತಿಯಲ್ಲಿರುವ ಕೋಳಿ ಫಾರಂಗಳನ್ನು ಸುಧಾರಣೆ ಮಾಡಿ ಉತ್ತಮವಾಗಿ ನಡೆಸಿ. ಆನಂತರ ಇತರೆ ಫಾರಂಗಳನ್ನು ಮಹಾಮಂಡಳ ವ್ಯಾಪ್ತಿಗೆ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಕೋಳಿ ಸಾಕಾಣಿಕೆಗೆ ವ್ಯಾಪಕ ಅವಕಾಶಗಳಿವೆ. ಅಲ್ಲಿನ ರೈತರಿಗೆ ಸೂಕ್ತ ತರಬೇತಿ ನೀಡಿ ಪೆÇ್ರೀ ಸಚಿವರು ಸಲಹೆ ನೀಡಿದರು.
ಬಿಬಿಎಂಪಿ ಸದಸ್ಯರಾದ ಎಂ.ನಾಗರಾಜ್, ಕುಕ್ಕುಟ ಮಹಾಮಂಡಳದ ಅಧ್ಯಕ್ಷ ಡಿ.ಕೆ.ಕಾಂತರಾಜ್, ಉಪಾಧ್ಯಕ್ಷ ಡಿ.ಎಸ್.ರುದ್ರಮುನಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ.ಟಿ.ಶಿವರಾಮ್ ಭಟ್, ಐವಿಟಿಐ ಅಧ್ಯಕ್ಷ ಡಾ.ಜಿ.ದೇವೇಗೌಡ, ಸಿಪಿಟಿಒ ನಿರ್ದೇಶಕ ಡಾ.ಪಿ.ಎಸ್.ಮಹೇಶ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.