ಕಳೆದ ವರ್ಷ ಅತಿಹೆಚ್ಚು ಬಂಡವಾಳ ರಾಜ್ಯದಲ್ಲಿ ಹೂಡಿಕೆ

Varta Mitra News

ಬೆಂಗಳೂರು, ಅ.12- ಹಲವು ಅಡ್ಡಿ-ಆತಂಕದ ನಡುವೆಯೂ ದೇಶದಲ್ಲೇ ಕರ್ನಾಟಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿ ಹೊರಹೊಮ್ಮಿದ್ದು, ಕಳೆದ ವರ್ಷ ಅತಿಹೆಚ್ಚು ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದೆ.

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಬಂಡವಾಳ ಹೂಡಿಕೆದಾರರಿಗೆ ದೇಶದಲ್ಲೇ ಕರ್ನಾಟಕ ಸೂಕ್ತ ತಾಣವಾಗಿದೆ.

ಕರ್ನಾಟಕದಲ್ಲಿ 79.866 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಿದ್ದರೆ ನಂತರದ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ತವರೂರು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳು ಕ್ರಮವಾಗಿ ಸ್ಥಾನ ಪಡೆದಿವೆ .

2018ರ ಜನವರಿಂದ ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ದೇಶ ಮತ್ತು ವಿದೇಶಗಳ ವಿವಿಧ ಬಂಡವಾಳಸ್ಥರು ಒಟ್ಟು 79,866 ಕೋಟಿ ಹೂಡಿಕೆಯಾಗಿದೆ. ಇದು ದೇಶದಲ್ಲೇ ಹೂಡಿಕೆಯಾದ ಒಟ್ಟು ಬಂಡವಾಳದ ಶೇ.26.61ರಷ್ಟಾಗಿದೆ.
2017ರಲ್ಲಿ ಬಂಡವಾಳ ಹೂಡಿಕೆ ರಾಜ್ಯಗಳ ಪೈಕಿ ಕರ್ನಾಟಕ 9ನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನದಲ್ಲಿ ಗುಜರಾತ್ ಇತ್ತು. ಆದರೆ 2018ರಿಂದ ರಾಜ್ಯಕ್ಕೆ ಬಂಡವಾಳ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹರಿದುಬಂದಿದೆ ಎಂಬುದು ಕೇಂದ್ರ ಸರ್ಕಾರದ ಅಂಕಿಸಂಖ್ಯೆಗಳಿಂದಲೇ ಸಾಬೀತಾಗಿದೆ.

ಕಾರಣವೇನು:
ಬೇರೆ ರಾಜ್ಯಗಳಿಗಿಂತ ಹೂಡಿಕೆದಾರರು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದೆ ಬರಲು ಕಾರಣವೆಂದರೆ ಇಲ್ಲಿ ಸಿಗುವ ಮೂಲಭೂತ ಸೌಕರ್ಯಗಳು. ರಾಜ್ಯ ಸರ್ಕಾರ ಏಕಗವಾಕ್ಷಿ ಪದ್ಧತಿಯಡಿ ಹೂಡಿಕೆದಾರರಿಗೆ ನಿಗದಿತ ಅವಧಿಯೊಳಗೆ ಭೂಮಿ ಮಂಜೂರು ಮಾಡಿಕೊಡುವುದು, ವಿದ್ಯುತ್, ರಸ್ತೆ, ನೀರು ಪೂರೈಕೆ, ಸುರಕ್ಷತೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತದೆ.

ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಒಂದು ಕಡೆ ನಕ್ಸಲೀಯರ ಹಾವಳಿಯಿಂದ ಬಂಡವಾಳ ಹೂಡಿಕೆದಾರರಿಗೆ ಸುರಕ್ಷತೆಯ ಭರವಸೆ ಇರುವುದಿಲ್ಲ. ಅಲ್ಲದೆ ಕರ್ನಾಟಕದಂತೆ ಶೀಘ್ರವಾಗಿ ಹೂಡಿಕೆದಾರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಿಲ್ಲ ಎಂಬ ಆರೋಪವೂ ಇದೆ.
ಕರ್ನಾಟಕದಲ್ಲಿ ಮಾತ್ರ ಬಂಡವಾಳ ಹೂಡುವವರಿಗೆ ಯಾವಾಗಲೂ ಸರ್ಕಾರ ರತ್ನಗಂಬಳಿ ಹಾಕುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ತುಮಕೂರು ಸೇರಿದಂತೆ ಮತ್ತಿತರ ಕಡೆ ಈಗಲೂ ಹೂಡಿಕೆದಾರರಿಗೆ ಈ ನಗರಗಳು ಅತ್ಯುತ್ತಮ ಸ್ಥಳಗಳಾಗಿವೆ.

ಮೊದಲಿನಿಂದಲೂ ಕರ್ನಾಟಕ ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದೆ. ಈಗ ನಾವು ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯಕ್ಕೆ ಇನ್ನಷ್ಟು ಬಂಡವಾಳ ಹರಿದುಬರುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸ್ಥಾನರಾಜ್ಯಹೂಡಿಕೆ
(ಕೋಟಿಗಳಲ್ಲಿ)
1ಕರ್ನಾಟಕ 79,866
2ಗುಜರಾತ್ 51,586
3ರಾಜಸ್ಥಾನ35,150
4ಮಹಾರಾಷ್ಟ್ರ 33,257
5ಮಧ್ಯಪ್ರದೇಶ20,607
6ಉತ್ತರ ಪ್ರದೇಶ11,741
7ಆಂಧ್ರಪ್ರದೇಶ6,529
8ಪಶ್ಚಿಮ ಬಂಗಾಳ 6,249

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ