ಕಸ ವಿಲೇವಾರಿ ಸಮಸ್ಯೆ ಎದುರಾದರೆ ಗಂಭೀರ ಪರಿಣಾಮ – ಮೇಯರ್ ಎಚ್ಚರಿಕೆ

ಬೆಂಗಳೂರು, ಅ.12- ನಗರದ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಅಭಿಯಂತರರು ಆದ್ಯತೆ ನೀಡಬೇಕು. ಮತ್ತೆ ಈ ಸಮಸ್ಯೆ ಎದುರಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದರು.

ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಗಳ ಬಗ್ಗೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೇಯರ್ ಈ ರೀತಿ ಎಚ್ಚರಿಕೆ ನೀಡಿದರು.

ಕಸ ಸಂಗ್ರಹ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಹಾಕಲು ಕೇವಲ ಆರು ತಿಂಗಳು ಮಾತ್ರ ಅವಕಾಶವಿದೆ. ಈ ಬಗ್ಗೆ ಗಮನ ಹರಿಸಬೇಕು. ಇನ್ನು ಮುಂದೆ ವಾರ್ಡ್‍ವಾರು ಕಸದ ಟೆಂಡರ್ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದರಿಂದ ಸ್ವಲ್ಪ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.

ಉಳಿದಿರುವ ಕಸದ ಘಟಕಗಳ ಕಾರ್ಯಾರಂಭದ ಬಗ್ಗೆ ಗಮನ ಹರಿಸಿ, ನಗರದಲ್ಲಿ ಕಸದ ಸಮಸ್ಯೆ ನಿವಾರಿಸಲು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದೇವೆ. ಆದರೂ ಸಮಸ್ಯೆ ಇದ್ದೇ ಇದೆ. ಇದು ಹೀಗೇ ಮುಂದುವರಿದರೆ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ವಸತಿ ಮತ್ತು ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಣೆ ಮಾಡುವ ಆಟೋಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ಇನ್ನು ಮುಂದೆ ಮನೆಗಳಿಂದ ಕಸ ಸಂಗ್ರಹಿಸುವ ಆಟೋಗಳಿಗೆ ಕಡ್ಡಾಯವಾಗಿ ಹಸಿರು ಬಣ್ಣ ಬಳಿಯಬೇಕು. ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೋಗಳಿಗೆ ಹಳದಿ ಬಣ್ಣ ಹಾಕಿರಬೇಕು ಎಂದು ಮೇಯರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರತ್ಯೇಕ ಘಟಕ: ಕಂದಾಯ ಇಲಾಖೆಗೆ ಇರುವಂತೆ ಕಸದ ಸಮಸ್ಯೆ ನಿವಾರಿಸಲು ಕಸಕ್ಕೆ ಪ್ರತ್ಯೇಕ ಘಟಕ ತೆರೆಯಬೇಕಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಕಸ ವಿಲೇವಾರಿ ಅಭಿಯಂತರರ ಘಟಕ ತೆರೆಯಲು ಆದ್ಯತೆ ನೀಡಲಾಗುವುದು ಎಂದು ಗಂಗಾಂಬಿಕೆ ತಿಳಿಸಿದರು.
ಘಟಕ ತೆರೆಯುವವರೆಗೂ ನಗರದಲ್ಲಿ ಯಾವುದೇ ಕಸದ ಸಮಸ್ಯೆ ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಮೇಯರ್ ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ