ನವದೆಹಲಿ: ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ, ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ಮಿ ಟೂ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ಪ್ರಕರಣಗಳ ವಿಚಾರಣೆಗಾಗಿ ಹಿರಿಯ ನ್ಯಾಯಿಕ, ಕಾನೂನು ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚಿಸುವ ಕುರಿತೂ ಮಾಹಿತಿ ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ. ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬೆನ್ನಲ್ಲೇ ಮೊದಲ ಬಾರಿಗೆ ಅವರ ವಿರುದ್ಧ ಧ್ವನಿ ಎತ್ತಿರುವ ಮನೇಕಾ ಗಾಂಧಿ, ಆರೋಪದ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸಂಪಾದಕರಾಗಿದ್ದ ಎಂ. ಜೆ. ಅಕ್ಬರ್ ವಿರುದ್ಧ ಸುಮಾರು 10 ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪುರುಷರು ಅಧಿಕಾರ ಕೇಂದ್ರಸ್ಥರಾಗಿದ್ದಾಗ ಇಂತಹ ಕೃತ್ಯಗಳು ನಡೆಯುತ್ತವೆ. ಈ ಬಗ್ಗೆ ತನಿಖೆ ಸಮಗ್ರ ತನಿಖೆ ನಡೆಯಬೇಕು ಎಂದು ಮೇನಕಾ ಗಾಂಧಿ ತಿಳಿಸಿದ್ದರು.
ಮಿಟೂ ಅಭಿಯಾನದಲ್ಲಿ ಹೊರಬಂದಿರುವ ಪ್ರಕರಣಗಳು ಯಾವಾಗ ನಡೆದಿದ್ದವು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವುಗಳೆಲ್ಲವೂ ತಡವಾಗಿ ಬೆಳಕಿಗೆ ಬಂದಿದ್ದು, ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಾವೂ ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧವಿರುವುದಾಗಿ ಮನೇಕಾ ಗಾಂಧಿ ಪುನರ್ ಉಚ್ಚರಿಸಿದ್ದಾರೆ.