ಬೆಂಗಳೂರು, ಅ.11- ರಮಿಳಾ ಉಮಾಶಂಕರ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಉಪಮಹಾಪೌರರ ಸ್ಥಾನವನ್ನು ಮೈತ್ರಿ ಕೂಟಕ್ಕೆ ಬೆಂಬಲ ನೀಡಿರುವ ತಮಗೇ ನೀಡಬೇಕೆಂದು ಬಿಬಿಎಂಪಿಯ ಆರು ಮಂದಿ ಪಕ್ಷೇತರ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಇಂದು ಸಭೆ ನಡೆಸಿದ ಪಕ್ಷೇತರ ಸದಸ್ಯರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಪರ ಮತ ಚಲಾಯಿಸಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಲು ಸಹಕರಿಸಿದ್ದ ಲಕ್ಷ್ಮೀ ನಾರಾಯಣ್, ಆನಂದ್ಕುಮಾರ್, ಚಂದ್ರಪ್ಪ ರೆಡ್ಡಿ, ಏಳುಮಲೈ, ಗಾಯತ್ರಿ, ಮುಜಾಹಿದ್ ಪಾಷ ಇಂದಿನ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು.
ಒಟ್ಟು ಎಂಟು ಮಂದಿ ಪಕ್ಷೇತರರು ಆರಿಸಿ ಬಂದಿದ್ದು, ಇವರಲ್ಲಿ ಮಮತಾ ಶರವಣ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ರೆಡ್ಡಿ ಅವರು ಮೇಯರ್ ಚುನಾವಣೆ ಸಂದರ್ಭದಲ್ಲೇ ಬಿಜೆಪಿಗೆ ಹೋಗಿದ್ದರು. ಹಾಗಾಗಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿರಲಿಲ್ಲ.
ಇವರಿಬ್ಬರನ್ನು ಬಿಟ್ಟರೆ ನಾವು ಆರು ಮಂದಿ ಒಗ್ಗಟ್ಟಾಗಿದ್ದೇವೆ. ನಾವುಗಳು ಬೆಂಬಲಿಸಿದ್ದರಿಂದಲೇ ಗಂಗಾಂಬಿಕೆ ಮೇಯರ್, ರಮಿಳಾ ಉಮಾಶಂಕರ್ ಉಪಮೇಯರ್ ಆದರು. ಈಗ ರಮಿಳಾ ಅವರ ಅಕಾಲಿಕ ಮರಣದಿಂದ ಈ ಸ್ಥಾನ ಖಾಲಿ ಇದೆ. ಉಪಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತರು ಮತ್ತೊಮ್ಮೆ ಚುನಾವಣೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಈ ಸ್ಥಾನವನ್ನು ನಮ್ಮ ಆರು ಮಂದಿಯಲ್ಲಿ ಯಾರಿಗಾದರೂ ನೀಡಲಿ. ನಮ್ಮ ಅಭ್ಯಂತರವಿಲ್ಲ ಎಂದು ಲಕ್ಷ್ಮೀನಾರಾಯಣ್ ತಿಳಿಸಿದರು.
ನಮ್ಮ ಆರೂ ಜನ ಪಕ್ಷೇತರರ ತೀರ್ಮಾನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರಿಗೆ ತಿಳಿಸಿ ಮನವಿ ಮಾಡುತ್ತೇವೆ. ನಮ್ಮ ಮನವಿ ಪರಿಗಣಿಸಿ ಉಪಮೇಯರ್ ಸ್ಥಾನವನ್ನು ನಮ್ಮಲ್ಲಿ ಯಾರಿಗೇ ಕೊಟ್ಟರೂ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟಕ್ಕೆ ಮುಜುಗರವಾಗದಂತೆ ಆ ಸ್ಥಾನವನ್ನು ಆಬಾಧಿತವಾಗಿ ಮುಂದುವರೆಸಿಕೊಂಡು ಹೋಗುತ್ತೇವೆ. ನಮ್ಮ ಈ ಬೇಡಿಕೆಯನ್ನು ಕುಮಾರಸ್ವಾಮಿಯವರು ಪುರಸ್ಕರಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.