ಕೃಷಿ ಸಾಲ ಮನ್ನಾ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಸಿದ್ಧ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು ಸಹಕರಿಸುತ್ತಿಲ್ಲ: ಸಿಎಂ ಆರೋಪ

ಬೆಂಗಳೂರು, ಅ.11- ರೈತರ ಕೃಷಿ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು ಸಹಕರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕಾರಣ ಮಾಡುವುದನ್ನು ಬಿಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಕೇಂದ್ರದ ಹಣಕಾಸು ಸಚಿವ ಅರುಣ್‍ಜೇಟ್ಲಿ ಅವರ ಬಳಿ ಪ್ರಭಾವ ಬೀರಿ ಬ್ಯಾಂಕುಗಳಿಂದ ರಾಜ್ಯ ಸರ್ಕಾರ ಕೇಳಿರುವ ಮಾಹಿತಿ ಕೊಡಿಸಲಿ.

ಮಾಹಿತಿ ಕೊಡಿಸಲು ಬಿಜೆಪಿಯವರು ಪ್ರಧಾನಿಯನ್ನಾದರೂ ಭೇಟಿ ಮಾಡಲಿ, ಅರುಣ್‍ಜೇಟ್ಲಿ ಅಥವಾ ಆರ್‍ಬಿಐನ ಅಧಿಕಾರಿಗಳು ಸೇರಿದಂತೆ ಯಾರ ಬಳಿ ಮಾತನಾಡಿದರೂ ಚಿಂತೆಯಿಲ್ಲ. ನಮಗೆ ರೈತರು ಪಡೆದಿರುವ ಸಾಲದ ವಿವರ ಬೇಕು ಎಂದರು.

ಎಷ್ಟು ರೈತರು ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕರೆ ನಾವು ತಕ್ಷಣ ಹಣ ಬಿಡುಗಡೆ ಮಾಡಲು ಸಿದ್ದರಿದ್ದೇವೆ. ಸಾಲ ಮನ್ನದ ಪೈಕಿ ಈಗಾಗಲೇ ಆರೂವರೆ ಸಾವಿರ ಕೋಟಿ ರೂ.ಗಳನ್ನು ಹೊಂದಿಸಿ ಸಿದ್ದವಾಗಿಟ್ಟುಕೊಂಡಿದ್ದೇವೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲು ಸಿದ್ಧವಿದ್ದರೂ ಬ್ಯಾಂಕುಗಳು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿವೆ ಎಂದು ತಿಳಿಸಿದರು.

ಬಿಜೆಪಿಯವರು ಅನಗತ್ಯವಾಗಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಹಣ ಬಿಡುಗಡೆ ಮಾಡಲು ನಮ್ಮ ತಕರಾರು ಇಲ್ಲ, ಹಣದ ಸಮಸ್ಯೆಯೂ ಇಲ್ಲ. ಇಲ್ಲಿ ಸಮಸ್ಯೆಯಾಗಿರುವುದು ಬ್ಯಾಂಕುಗಳು ಮಾಹಿತಿ ನೀಡದೇ ಇರುವುದರಿಂದ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಅದಕ್ಕೆ ಹಣ ಬಿಡುಗಡೆ ಮಾಡಲು ಸಿದ್ದವಿದ್ದರೂ ಅದನ್ನು ಬಳಸಿಕೊಳ್ಳದೆ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಏಕತಿರುವಳಿ ಯೋಜನೆ ಸೌಲಭ್ಯ ನೀಡಲಾಗುತ್ತದೆ. ಸಾಲ ತೀರಿಸಿ ಬಡ್ಡಿ ಮನ್ನಾ ಸೌಲಭ್ಯ ಪಡೆಯಿರಿ ಎಂಬೆಲ್ಲಾ ಜಾಹೀರಾತು ಮತ್ತು ತಿಳುವಳಿಕೆ ಪತ್ರಗಳನ್ನು ಬ್ಯಾಂಕುಗಳು ಪ್ರಕಟಿಸುತ್ತಿವೆ. ರಾಜ್ಯ ಸರ್ಕಾರ ಬ್ಯಾಂಕುಗಳ ನೋಟಿಸ್‍ನಲ್ಲಿರುವ ಅಂಶಗಳ ಅನುಗುಣವಾಗಿಯೇ ಸಾಲ ಮನ್ನ ಮಾಡಿದೆ. ನಾವು ಕೇಳಿದ್ದ ದತ್ತಾಂಶಗಳನ್ನು ನೀಡದೆ ವಿಳಂಬ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸಹಕಾರ ನೀಡಿ ಬ್ಯಾಂಕುಗಳಿಂದ ಮಾಹಿತಿ ಕೊಡಿಸಿದರೆ. ನಾನು ರೈತರ ಅನುಕೂಲಕ್ಕಾಗಿ ತಕ್ಷಣವೇ ಹಣ ಬಿಡುಗಡೆ ಮಾಡಲು ಸಿದ್ದನಿದ್ದೆನೆ ಎಂದು ಹೇಳಿದರು.

ರಾಮನಗರ ಮತ್ತು ಮಂಡ್ಯ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಅಧ್ಯಕ್ಷರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಾರಿಗೆ ಇಲಾಖೆ ಜತೆ ಇಂದು ಸಭೆ ನಡೆಯಲಿದೆ. ಬಸ್ ಪ್ರಯಾಣ ದರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ