ಉಪ ಚುನಾವಣೆ: ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್-ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ

ಬೆಂಗಳೂರು, ಅ.11- ರಾಜ್ಯದಲ್ಲಿ ಉಪ ಚುನಾವಣೆಯ ರಂಗು ಹೆಚ್ಚಾಗತೊಡಗಿದ್ದು, ಗಣಿನಾಡು ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿಗೆ ಮುಂದಾಗಿರುವ ಜೆಡಿಎಸ್ ಪಕ್ಷ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿ ಇನ್ನುಳಿದ ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್¿ಗೆ ಬಿಟ್ಟುಕೊಡಲು ಬಯಸಿದೆ. ಆದರೆ, ಕಳದೆ ಮೂರು ದಿನಗಳಿಂಂದ ದೋಸ್ತೀ ಪಕ್ಷಗಳು ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸರಣಿ ಸಭೆ ನಡೆಸುತ್ತಿದ್ದರೂ ಈ ವರೆಗೂ ಅಂತಿಮಗೊಂಡಿಲ್ಲ.

ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ರಾಜ್ಯದ ಗಮನ ಸೆಳೆದಿರುವುದು ಗಣಿ ಜಿಲ್ಲೆ ಬಳ್ಳಾರಿ ಮಾತ್ರ. ಒಂದು ಕಾಲದಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಹಾಗೂ ಬಿಜೆಪಿಯ ಸುಷ್ಮ ಸ್ವರಾಜ್ ಪರಸ್ಪರ ಎದುರಾಳಿಗಳಾಗಿದ್ದರಿಂದ ಈ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು.

ಈಗ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬಲಿಷ್ಠ ನಾಯಕರನ್ನು ಕಣದಲ್ಲಿ ನಿಲ್ಲಿಸಲು ನಿರ್ಧರಿಸಿದ್ದು, ಬಿಜೆಪಿ ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಡಿ.ಕೆ.ಶಿವಕುಮಾರ್ ಗುಂಪುಗಳ ನಡುವೆ ನೇರ ಹಣಾಹಣಿ ಎದುರಾಗಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ರಾಜೀನಾಮೆ ನೀಡಿದ್ದ ಶ್ರೀರಾಮುಲು ಅವರಿಗೆ, ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡುವಂತೆ ಬಿಜೆಪಿ ನಾಯಕತ್ವ ಮುಕ್ತಹಸ್ತ ನೀಡಿದೆ. ಇದರಂತೆ ಶ್ರೀರಾಮುಲು ಅವರ ಸಹೋದರಿ ಜೆ. ಶಾಂತ ಈಗಾಗಲೇ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವಂತೆ ನೋಡುವ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಶ್ರೀರಾಮುಲು ಅವರ ನಿರ್ಧಾರವನ್ನು ಪಕ್ಷ ಒಪ್ಪಿಕೊಳ್ಳಲಿದೆ. ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಂಗಳವಾರ ಅಥವಾ ಬುಧವಾರ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಭಾಗವಹಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಜೊತೆಗೆ ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಗಳಿವೆ.

ಇನ್ನು ತಮ್ಮ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧಿಸುವ ಕುರಿತಂತೆ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸವಾಲನ್ನು ಸ್ವೀಕರಿಸಿರುವ ಶ್ರೀರಾಮುಲು ಅವರು, ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬಲಿಷ್ಠ ನಾಯಕರಾಗಿರಬಹುದು. ಆದರೆ, ಅವರ ಆಟ ಹಾಗೂ ತಂತ್ರಗಳು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್.ವೈ ಗೋಪಾಲಕೃಷ್ಣ ಅವರನ್ನು ಗೆಲ್ಲಿಸುವಲ್ಲಿ ಶಿವಕುಮಾರ್ ಪಾತ್ರ ಪ್ರಮುಖವಾಗಿತ್ತು. ಈ ಚುನಾವಣೆ ಉಸ್ತುವಾರಿಯನ್ನು ಅವರೇ ನೋಡಿಕೊಂಡಿದ್ದರು.

ಇದೀಗ ತಮ್ಮ ರಾಜೀನಾಮೆಯಿಂದ ತೆರವಾಗಿರುವ ಉಪಚುನಾವಣೆಯಲ್ಲಿ ರಾಮುಲು ತಮ್ಮ ನಾಯಕತ್ವವನ್ನು ಸಾಬೀತುಮಾಡುವ ಅನಿವಾರ್ಯತೆ ಎದುರಾಗಿದೆ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿರುವ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದದ್ಯಾಂತ ಪ್ರವಾಸ ನಡೆಸಿದ್ದರು. ಪರಿಣಾಮ ಎಸ್.ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿವ ಸ್ಥಾನಗಳಿಸಲು ಸಾಧ್ಯವಾಗಿತ್ತು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಕೋಟೆ ಕೆಡವಲು ಬಿಜೆಪಿ ಕೂಡಾ ತನ್ನದೆಯಾದ ಕಾರ್ಯತಂತ್ರ ರೂಪಿಸಿದೆ.ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಸಹೋದರಿಯನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ಅವರ ಮೇಲಿದೆ.ತಮ್ಮ ರಾಜಕೀಯ ಎದುರಾಳಿಗಳ ಬಾಯಿ ಮುಚ್ಚಿಸಬೇಕಾದರೆ ಕಮಲ ಅರಳಿಸುವುದು ಅನಿವಾರ್ಯ.

ಇದಲ್ಲಕ್ಕೀಂತ ಹೆಚ್ಚಾಗಿ ತಮ್ಮ ರಾಜಕೀಯ ಎದುರಾಳಿ ಡಿ.ಕೆ. ಶಿವಕುಮಾರ್‍ಗೆ ಈ ಉಪಸಮರದಲ್ಲಿ ಸೋಲಿಸುವ ಮೂಲಕ ಹಳೆಯ ಸೇಡನ್ನು ತಿರಿಸಿಕೊಳ್ಳುವ ಉಮೇದುನಲ್ಲಿದ್ದಾರೆ ರಾಮುಲು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ