ವರಿಷ್ಠರಿಗೆ ತಲೆನೋವಾದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಅ.11- ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮೂರು ಪಕ್ಷಗಳಲ್ಲೂ ಬಂಡಾಯ ಕಾಣಿಸಿಕೊಂಡಿದ್ದು, ಹುರಿಯಾಳುಗಳ ಆಯ್ಕೆ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಬಂಡಾಯ ಶಮನಕ್ಕೆ ಪ್ರಯತ್ನ ನಡೆಯುತ್ತಿದ್ದರೂ ಇದುವರೆಗೆ ಶಮನ ತಹಬದಿಗೆ ಬಂದಿಲ್ಲ. ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಬಿಜೆಪಿಯಲ್ಲೂ ಆಯ್ಕೆ ಬಿಕ್ಕಟ್ಟು ತೀವ್ರಗೊಂಡಿದ್ದು, ಕೊನೆಯ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಗಣಿ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಹುರಿಯಾಳನ್ನು ಅಂತಿಮಗೊಳಿಸಲು ಇಂದು ಕೂಡ ಸಾಧ್ಯವಾಗಿಲ್ಲ. ಅಭ್ಯರ್ಥಿ ಆಯ್ಕೆ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಸಭೆ ಫಲ ನೀಡಿಲ್ಲ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಳ್ಳಾರಿ ಶಾಸಕರ ಸಭೆಯನ್ನು ಇಂದು ಕೂಡ ಕರೆಯಲಾಗಿತ್ತು. ಆದರೆ ಶಾಸಕರಾದ ಆನಂದ್ ಸಿಂಗ್, ಭೀಮಾ ನಾಯ್ಕ್, ಗಣೇಶ್ ಸೇರಿದಂತೆ ಮತ್ತಿತರ ನಾಯಕರು ಗೈರು ಹಾಜರಾಗಿದ್ದರು. ಇದರಿಂದ ಇಂದು ನಡೆಯಬೇಕಾಗಿದ್ದ ಸಭೆಯನ್ನು ರದ್ದು ಪಡಿಸಿ ನಾಳೆ ಪುನಃ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಸಕ ನಾಗೇಂದ್ರ ಅವರ ಸಹೋದರ ಗಣೇಶ್ ಪ್ರಸಾದ್‍ಗೆ ಬಳ್ಳಾರಿ ಕ್ಷೇತ್ರದಿಂದ ಟಿಕೆಟ್ ಕೊಡಬಾರದು ಎಂಬುದು ಈ ಶಾಸಕರ ಆಗ್ರಹವಾಗಿದೆ. ಹೀಗಾಗಿ ಈ ಭಾಗದ ಶಾಸಕರು ಶಿವಕುಮಾರ್ ಅವರ ಸಭೆಗೆ ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ.

ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿದ್ದರೂ ಕಾಂಗ್ರೆಸ್ ಇನ್ನೂ ಹೆಸರು ಅಂತಿಮಗೊಳಿಸಿಲ್ಲ. ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ,ಕಾಗೋಡು ತಿಮ್ಮಪ್ಪ, ಮುಖಂಡ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರು ಕೇಳಿಬರುತ್ತಿವೆಯಾದರೂ ಅಂತಿಮಗೊಂಡಿಲ್ಲ
ಇಕ್ಬಾಲ್ ಹುಸೇನ್ ಬಂಡಾಯ
ಸ್ಥಳೀಯರ ವಿರೋಧದ ನಡುವೆಯೂ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಭಿನ್ನಮತ ತಾರಕಕ್ಕೇರಿದೆ. ರಾಮನಗರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್ ಕಣಕ್ಕಿಳಿಯಲು ಮುಂದಾಗಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಥಳೀಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸಡ್ಡುಹೊಡೆದಿದ್ದಾರೆ. ಇಂದು ಇಕ್ಬಾಲ್ ಹುಸೇನ್ ಜೊತೆ ಮಾತುಕತೆ ನಡೆಸಿರುವ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಮಂಡ್ಯದಲ್ಲೂ ವಿರೋಧ
ಈ ಮಧ್ಯೆ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಥಳೀಯ ಅಭ್ಯರ್ಥಿಯನ್ನೇ ನಿಲ್ಲಿಸಬೇಕು. ಜೆಡಿಎಸ್‍ಗೆ ಬೆಂಬಲ ನೀಡಿದರೆ ಅವರೆಲ್ಲಾಅನಾಥರಾಗುತ್ತಾರೆ ಎಂದು ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಹೇಳುವ ಮೂಲಕ ಸ್ಪರ್ಧೆಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ನಾನು ಉಪಚುನಾವಣೆಗೆ ಆಕಾಂಕ್ಷಿ, ಈ ಕುರಿತು ನಮ್ಮ ಸ್ಥಳೀಯ ಕಾಂಗ್ರೆಸ್ ಮುಖಂಡರ ಬಳಿ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ 5 ಲಕ್ಷ ಕಾಂಗ್ರೆಸ್ ಮತದಾರರು ಮತ್ತು ಕಾರ್ಯರ್ತರಿದ್ದು, ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಅವಕಾಶ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದೇನೆ ಎಂದರು.

ನಾನೇ ಅಂತ ಅಲ್ಲ, ರಮ್ಯ ಆಗಲಿ ಅಥವಾ ಇನ್ನೂ ತುಂಬಾ ನಾಯಕರಿದ್ದಾರೆ. ಹಾಗಾಗಿ ಮಂಡ್ಯ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹಾಕಿ ಎಂದು ಕೇಳಿಕೊಂಡಿದ್ದೇನೆ. ಸ್ಥಳೀಯ ನಾಯಕರು ಈ ವಿಷಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ. ಇಂದು ಅಥವಾ ನಾಳೆಯೊಳಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಈಗಾಗಲೇ ರಾಮನಗರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ ನಿನ್ನೆಯಿಂದ ನಡೆಯುತ್ತಿರುವ ಬೆಳವಣಿಗೆಯಿಂದ ದೋಸ್ತಿ ಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಯಲು ಮಾಡಿದೆ.

ಬಿಜೆಪಿಯಿಂದ ಕಾದುನೋಡುವ ತಂತ್ರ
ಇನ್ನು ರಾಮನಗರ ಮತ್ತು ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಿಜೆಪಿ ಕಾದುನೋಡುವ ತಂತ್ರಕ್ಕೆ ಶರಣಾಗಿದೆ. ಬಿಜೆಪಿಯಿಂದ ರಾಮನಗರ ಕ್ಷೇತ್ರಕ್ಕೆ ರುದ್ರೇಶ್, ಸಿ.ಪಿ. ಯೋಗೇಶ್ವರ್, ಚಂದ್ರಶೇಖರ್ ಅವರ ಹೆಸರು ಕೇಳಿಬರುತ್ತಿದ್ದರೂ ಇವರಿಗಿಂತ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.

ರಾಮನಗರದಲ್ಲಿ ಕಾಂಗ್ರೆಸ್ – ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡರೆ ಕಾಂಗ್ರೆಸ್ ಆಕಾಂಕ್ಷಿಗೇ ಗಾಳ ಹಾಕಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಕಾಂಗ್ರೆಸ್‍ನಿಂದ ಇಕ್ಬಾಲ್ ಹುಸೇನ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಸ್ಥಳೀಯ ಕಾರ್ಯಕರ್ತರೂ ಇಕ್ಬಾಲ್‍ಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದ ಪಕ್ಷದ ಇಮೇಜ್‍ಗೆ ಧಕ್ಕೆ ಆಗುತ್ತದೆ ಎಂಬ ವಾದವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

ಆಪರೇಷನ್ ಕಮಲ
ಕಾಂಗ್ರೆಸ್‍ಕಾರ್ಯಕರ್ತರ ಈ ಬೇಡಿಕೆಯನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಇಕ್ಬಾಲ್ ಹುಸೇನ್ ಅವರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಳ್ಳುವ ಯತ್ನ ನಡೆಸಿದೆ ಎನ್ನಲಾಗಿದೆ. ಆದರೆ, ಬಿಜೆಪಿಗೆ ಹೋದರೆ ಅಲ್ಪಸಂಖ್ಯಾತ ಮತಗಳು ವಿಭಜನೆ ಆಗಲಿವೆ, ಒಂದು ವೇಳೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಕ್ಬಾಲ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮಾಸ್ಟರ್ ಪ್ಲಾನ್ ಮಾಡಿಕೊಂಡಿರುವ ಬಿಜೆಪಿ, ರಾಮನಗರದಲ್ಲಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಅಡಿಪಾಯ ಇಲ್ಲದ ಕಾರಣಕ್ಕೆ ಇಕ್ಬಾಲ್ ಪಕ್ಷೇತರರಾಗಿ ನಿಂತರೂ ಅವರಿಗೆ ಬೆಂಬಲ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ.

ಇನ್ನು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅಶ್ವತ್ಥ ನಾರಾಯಣಗಿಂತ ಪ್ರಬಲ ಅಭ್ಯರ್ಥಿಗಾಗಿ ಬಿಜೆಪಿಯ ಹುಡುಕಾಟ ನಡೆದಿದೆ. ಸ್ಥಳೀಯ ಮುಖಂಡ, ಒಕ್ಕಲಿಗ ಸಂಘದ ನಿರ್ದೇಶಕ ಪ್ರಸನ್ನ ಅವರಿಗೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಜೆಡಿಎಸ್‍ನಿಂದ ಯಾರು ಅಭ್ಯರ್ಥಿ ಎಂಬುದನ್ನು ನೋಡಿಕೊಂಡು ಅಭ್ಯರ್ಥಿ ಅಂತಿಮಗೊಳಿಸಿ ಕಣಕ್ಕಿಳಿಸುವ ಚಿಂತನೆ ಮಾಡಲಾಗಿದೆ.

ಬಿಜೆಪಿ ಈಗಾಗಲೇ ಶಿವಮೊಗ್ಗದಿಂದ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ, ಬಳ್ಳಾರಿಯಿಂದ ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರಿಗೆ ಟಿಕೆಟ್ ನಿಗದಿಗೊಳಿಸಿದೆ. ಜಮಖಂಡಿ ವಿಧಾನಸಭೆ ಕ್ಷೇತ್ರದಿಂದ ಶ್ರೀಕಾಂತ್ ಕುಲಕರ್ಣಿಗೆ ಟಿಕೆಟ್ ನೀಡಿದೆ. ಉಳಿದ ಈ ಎರಡು ಕ್ಷೇತ್ರಗಳಿಗೂ 15ನೇ ತಾರೀಖಿನವರೆಗೂ ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮೊರೆ ಹೋಗಿದೆ.

ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರಕ್ಕೆ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರ ಹೆಸರನ್ನು ಅಂತಿಮಗೊಳಿಸಿ, ಜಿಲ್ಲಾ ಚುನಾವಣಾ ಉಸ್ತುವಾರಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿದ್ದಾರೆ. ಆದರೆ, ಸುಶೀಲ್ ಕುಮಾರ್ ಬೆಳಗಲಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಆನಂದ್ ನ್ಯಾಮಗೌಡ ಅವರ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು ಬಂಡಾಯ ಏಳುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಮೂರು ಪಕ್ಷಗಳಿಗೂ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿಯೇ ಇದ್ದು, ಭಾರೀ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವುದು ಮೂರೂ ಪಕ್ಷಗಳ ಮುಖಂಡರಿಗೆ ಸವಾಲಿನ ಕೆಲಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ